“ಒಂದು ಕಾಲದಲ್ಲಿ 500 ರೂಪಾಯಿ ಸಂಭಾವನೆಗಾಗಿ ರಂಗಭೂಮಿಗೆ ಕಾಲಿಟ್ಟಿದ್ದ ನಾನು, ಇಂದು ದೇಶದ ಅತ್ಯುನ್ನತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ” ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ ‘ಮಿಥ್ಯ’ ಚಿತ್ರದ ಅಭಿನಯಕ್ಕಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾದ ಕರಾವಳಿಯ ಹೆಮ್ಮೆಯ ನಟಿ ರೂಪಶ್ರೀ ವರ್ಕಾಡಿ.

ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾದ ಬಳಿಕ ನೀಡಿದ ವಿಶೇಷ ಸಂದರ್ಶನದಲ್ಲಿ ರೂಪಶ್ರೀ ವರ್ಕಾಡಿ ತಮ್ಮ ಅಭಿನಯ ಪಯಣ, ರಂಗಭೂಮಿಯ ಆರಂಭಿಕ ದಿನಗಳು, ‘ಮಿಥ್ಯ’ ಚಿತ್ರದ ಸವಾಲಿನ ಪಾತ್ರ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪಡೆದ ಕ್ಷಣದ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
‘ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದ್ದು ಜೀವನದ ಅತಿದೊಡ್ಡ ಶಾಕ್’
“ಪ್ರಶಸ್ತಿ ಬಂದ ಸುದ್ದಿ ಕೇಳಿದ ಕ್ಷಣ ನಾನು ಶಾಕ್ ಆಗಿಬಿಟ್ಟೆ. ಖುಷಿಯಿಂದ ಕಣ್ಣೀರು ಬಂತು. ರಾಷ್ಟ್ರಮಟ್ಟದ ಪ್ರಶಸ್ತಿ ಸಿಗುತ್ತದೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ಮೊದಲ ಬಾರಿಗೆ ಈ ಗೌರವ ಸಿಕ್ಕಿರುವುದು ಹೆಮ್ಮೆ. ನಿರ್ದೇಶಕರು ಕರೆ ಮಾಡಿ ವಿಷಯ ತಿಳಿಸಿದಾಗ ನನ್ನ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಇದು ದೇವರ ಆಶೀರ್ವಾದ ಮತ್ತು ಪ್ರೇಕ್ಷಕರ ಪ್ರೀತಿ” ಎಂದು ರೂಪಶ್ರೀ ಹೇಳಿದರು.
‘ಮಿಥ್ಯ’ ಸಿನಿಮಾದ ಪಾತ್ರವೇ ದೊಡ್ಡ ಸವಾಲು
‘ಮಿಥ್ಯ’ ಸಿನಿಮಾದ ಪಾತ್ರದ ಕುರಿತು ಮಾತನಾಡಿದ ಅವರು, “ನಿರ್ದೇಶಕ ಸುಮಂತ್ ಸರ್ ವರ್ಕ್ಶಾಪ್ಗೆ ಕರೆಯುವಾಗ ಮೊದಲಿಗೆ ಕೊಂಚ ಆತಂಕವಿತ್ತು. ಆದರೆ ಅಲ್ಲಿಗೆ ಹೋದ ಬಳಿಕ ಪಾತ್ರದ ಆಳ ಅರ್ಥವಾಯಿತು. ಸ್ವಂತ ಮಕ್ಕಳಿಗಿಂತ ಇನ್ನೊಬ್ಬರ ಮಗುವಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವ ತಾಯಿಯ ಪಾತ್ರವನ್ನು ಅತ್ಯಂತ ಸಹಜವಾಗಿ ನಿರ್ವಹಿಸಬೇಕಿತ್ತು. ‘ಅಭಿನಯ ಮಾಡಬೇಡಿ, ಬದುಕಿ’ ಎಂದು ನಿರ್ದೇಶಕರು ಹೇಳುತ್ತಿದ್ದರು. ನನ್ನ ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರಗಳಲ್ಲಿ ಇದೂ ಒಂದು” ಎಂದು ತಿಳಿಸಿದರು.

₹500 ಆಸೆಯೇ ಬದುಕಿನ ತಿರುವು
ರೂಪಶ್ರೀ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡು, “ನಾನು ವರ್ಕಾಡಿ ಗ್ರಾಮದ ಹುಡುಗಿ. 9ನೇ ತರಗತಿಯಲ್ಲಿ ಓದುತ್ತಿದ್ದಾಗ ನಟನೆಯ ಬಗ್ಗೆ ಏನೂ ಗೊತ್ತಿರಲಿಲ್ಲ. ಊರಿನ ನಾಟಕ ತಂಡದಲ್ಲಿ ನಟಿಯ ಅಗತ್ಯ ಬಂದಾಗ ನನ್ನನ್ನು ಆಯ್ಕೆ ಮಾಡಿದರು. ಒಂದು ತಿಂಗಳ ಶಿಬಿರದ ಬಳಿಕ ಮೊದಲ ಬಾರಿಗೆ 500 ರೂಪಾಯಿ ಸಂಭಾವನೆ ಸಿಕ್ಕಿತು. ಅಷ್ಟು ದೊಡ್ಡ ಮೊತ್ತ ಮೊದಲ ಬಾರಿ ಕೈಗೆ ಬಂದಾಗ ತುಂಬಾ ಖುಷಿಯಾಯಿತು. ಅದೇ ಹಣದ ಆಸೆ ನನ್ನನ್ನು ಮತ್ತೊಂದು ನಾಟಕದತ್ತ ಕರೆದೊಯ್ದಿತು. ಬಳಿಕ 5,000 ರೂಪಾಯಿ ಸಿಕ್ಕಿತು. ಹೀಗೆ ಹಣಕ್ಕಾಗಿ ಆರಂಭವಾದ ಪಯಣವೇ ನಂತರ ನಟನೆಯ ಮೇಲಿನ ಪ್ರೀತಿಯಾಗಿ ಬದಲಾಯಿತು” ಎಂದು ಸ್ಮರಿಸಿದರು.
20 ವರ್ಷಗಳ ಸಿನಿ ಪಯಣ, 85ಕ್ಕೂ ಹೆಚ್ಚು ಸಿನಿಮಾಗಳು
ಕಳೆದ ಎರಡು ದಶಕಗಳಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರೂಪಶ್ರೀ ವರ್ಕಾಡಿ ತುಳು, ಕನ್ನಡ, ಬ್ಯಾರಿ, ಕೊಂಕಣಿ ಹಾಗೂ ಹವ್ಯಕ ಭಾಷೆಗಳ 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

“ನನ್ನ ಮೊದಲ ಸಿನಿಮಾ ತುಳುವಿನ ‘ಬಿರ್ಸೆ’. ನಂತರ ಬ್ಯಾರಿ ಸಿನಿಮಾ, ಬಳಿಕ ಕನ್ನಡದಲ್ಲಿ ‘ಒಂದು ಮೊಟ್ಟೆಯ ಕಥೆ’, ‘ಸೈಕೋ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದೇನೆ. 19-20ನೇ ವಯಸ್ಸಿನಲ್ಲೇ ತಾಯಿಯ ಪಾತ್ರಗಳನ್ನು ಮಾಡಿದ್ದೆ. ಸಿಕ್ಕ ಪ್ರತಿಯೊಂದು ಪಾತ್ರಕ್ಕೂ ಪ್ರಾಮಾಣಿಕವಾಗಿ ಜೀವ ತುಂಬಿದ್ದೇನೆ. 500 ರೂಪಾಯಿಯಿಂದ ಆರಂಭವಾದ ಈ ಪಯಣ ರಾಷ್ಟ್ರೀಯ ಪ್ರಶಸ್ತಿವರೆಗೆ ಬರುತ್ತದೆ ಎಂದು ಊಹಿಸಿರಲಿಲ್ಲ” ಎಂದು ರೂಪಶ್ರೀ ವರ್ಕಾಡಿ ಕೃತಜ್ಞತೆ ವ್ಯಕ್ತಪಡಿಸಿದರು.
ಸಿನೆಮಾ ನಿರ್ದೇಶನ ಮಾಡುವುದು ನನ್ನ ಕನಸು. ಆದರೆ ನನ್ನ ಮೇಲೆ ನಂಬಿಕೆ ಇಟ್ಟು ಕಥೆ ಕೊಟ್ಟು ನಿರ್ಮಾಣ ಮಾಡುವವರು ಬೇಕು! ನಾನೇ ಕಥೆ, ಚಿತ್ರಕಥೆ ಬರೆಯುವುದು ಕಷ್ಟ. ಆದರೆ ನಿರ್ದೇಶನ ಮಾತ್ರ ಜೀವನದಲ್ಲೊಂದು ಬಾರಿ ಮಾಡಲೇಬೇಕು ಅಂತ ಇದೆ. ಎಂದು ತಮ್ಮ ನಿರ್ದೇಶನದ ಕನಸು ತೆರೆದಿಟ್ಟಿರುವ ರೂಪಶ್ರೀ ಪ್ರಾಮಾಣಿಕ ಶ್ರದ್ಧೆಯಿಂದ, ಪ್ರೀತಿಯಿಂದ, ಗೌರವದಿಂದ ಕೆಲಸ ಶುರುಮಾಡಿದರೆ ಉಳಿದವೆಲ್ಲ ತಾವಾಗಿಯೇ ನಿಮ್ಮನ್ನು ಸೇರಬಹುದು. ಎನ್ನುತ್ತಾರೆ.




