ಸೆನ್ಸಾರ್ ಸಮಸ್ಯೆ ಸೇರಿದಂತೆ ಚಿತ್ರೋದ್ಯಮದ ಸಮಸ್ಯೆ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ: ನಿರ್ದೇಶಕರ ಸಂಗದ ಅಧ್ಯಕ್ಷರ ಅಭಿಮತ
ಇತ್ತೀಚೆಗೆ ಕನ್ನಡ ಸಿನಿಮಾ ರಂಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳ ಪೈಕಿ ಸೆನ್ಸಾರ್ ಸಮಸ್ಯೆ, ಸಬ್ಸಿಡಿ ಸಮಸ್ಯೆ ಬಹಳವೇ ಪ್ರಮುಖವಾಗಿದೆ. ಇತ್ತೀಚೆಗೆ ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಸಮಸ್ಯೆ ಜಾಸ್ತಿಯಾಗಿದೆ. ಎಲ್ಲವನ್ನೂ ಕೇಂದ್ರ ಸರ್ಕಾರದ ಅಡಿಯಲ್ಲಿ ನಿಯಂತ್ರಿಸುವ ಹೊಸ ನಿಯಮ ಬಂದಿದೆ. ಇದು ಬಹಳ ಬೇಸರದ ಸಂಗತಿ. ಇದರೊಡನೆ ಕನ್ನಡ ಚಿತ್ರರಂಗಕ್ಕೆ ಸರ್ಕಾರದಿಂದ ಬರಬೇಕಿರುವ ಸಬ್ಸಿಡಿ ಹಣ ಬಾಕಿ ಇದೆ. ಇತ್ತೀಚೆಗೆ ಕರ್ನಾಟಕ ಸರ್ಕಾರವು 20 ಕೋಟಿ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿದೆ ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಸಬ್ಸಿಡಿ ಬಾಕಿ ಉಳಿಸಿಕೊಂಡಿದ್ದೀರಿ. ಅದನ್ನು ಆದಷ್ಟು ಶಿಘ್ರವಾಗಿ ಬಿಡುಗಡೆ ಮಾಡಬೇಕಿದೆ ಎಂದು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್ ಅವರು ಹೇಳಿದ್ದಾರೆ.

“ಮೂವಿ ಕ್ಯಾಂಪಸ್” ಜೊತೆಗೆ ಮಾತನಾಡಿದ ಅವರು ಚಿತ್ರರಂಗ ಇಂದು ಎದುರಿಸುತ್ತಿರುವ ನಾನಾ ಸಮಸ್ಯೆಗಳ ಕುರಿತಂತೆ ಜೊತೆಗೆ ಚಿತ್ರರಂಗದ ಕುರುತ ಸರ್ಕಾರದ ನಿರ್ಲಕ್ಷ್ಯತನದ ಬಗೆಗೆ ವಿವರಿಸಿದ್ದಾರೆ. ವಿಶ್ವನಾಥ್ ಅವರ ಸಂದರ್ಶನದ ಪ್ರಮುಖ ಭಾಗ ಹೀಗಿದೆ-
ಸೆನ್ಸಾರ್ ಸಮಸ್ಯೆ, ಅಧಿಕಾರಿಗಳ ಮಲತಾಯಿ ಧೋರಣೆ
ಇತ್ತೀಚೆಗೆ ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಸಮಸ್ಯೆ ಜಾಸ್ತಿಯಾಗಿದೆ. ಎಲ್ಲವನ್ನೂ ಕೇಂದ್ರ ಸರ್ಕಾರದ ಅಡಿಯಲ್ಲಿ ನಿಯಂತ್ರಿಸುವ ಹೊಸ ನಿಯಮ ಬಂದಿದೆ. ಇದು ಬಹಳ ಬೇಸರದ ಸಂಗತಿ. ಇನ್ನು ಒಂದು ಸ್ಮೋಕ್ ಆಗಲಿ ಅಥವಾ ಒಂದು ಡ್ರಿಂಕ್ಸ್ ಆಗಲಿ, ಇದರಿಂದ ಸರ್ಕಾರಕ್ಕೆ ತುಂಬಾ ಲಾಭ ಬರುತ್ತಿದೆ; ಆದರೆ ಹಿಂದಿನಿಂದಲೂ ಅದನ್ನು ಸಿನಿಮಾಗಳಲ್ಲಿ ತೋರಿಸುವುದು ತಪ್ಪು ಎನ್ನುವ ನಿಯಮ ಇತ್ತು. ಯಾಕೆ ಅಂದರೆ, ಚಿತ್ರರಂಗವು ಎಲ್ಲಾ ಕಡೆ ಪ್ರತಿಯೊಬ್ಬರಿಗೂ ತಲುಪುವಂತಹ ಒಂದು ಮಾಧ್ಯಮ, ಅದರಿಂದ ಅದನ್ನು ತೋರಿಸಬಾರದು ಅಥವಾ ತೋರಿಸಿದರೂ ಅದು ತಪ್ಪು ಎನ್ನುವ ಸಾಮಾಜಿಕ ಕಳಕಳಿಯ ಸಂದೇಶವನ್ನು ತೆರೆಯ ಮೇಲೆ ಬಿತ್ತರಿಸಬೇಕಾಗಿತ್ತು. ಆದರೆ ಈಗ ಸಮಯ ಬದಲಾಗಿದೆ. ಕೇವಲ ಸ್ಮೋಕ್ ಹಾಗೂ ಡ್ರಿಂಕ್ಸ್ ಮಾತ್ರವಲ್ಲದೆ ಡಮ್ ಅಂಡ್ ಡಫ್ ಬಂದಿದೆ. ಇದೆಲ್ಲದರಿಂದ ನಿರ್ಮಾಪಕರಿಗೆ ಹೆಚ್ಚಿನ ಹೊರೆ ಬೀಳುತ್ತಿದೆ. ಆದರೆ ಇದರಿಂದಲೇ ಹೆಚ್ಚಿನ ಆದಾಯ ಗಳಿಸುವ ಸರ್ಕಾರ ಮಾತ್ರ ನಿರ್ಮಾಪಕರ ಹಿತ ಕಾಯುವುದರಿಂದ ಹಿಂದುಳಿದಿದೆ.
ನಿರ್ಮಾಪಕರ ಹಿತರಕ್ಷಣೆ ಆಗಲಿ
ಈ ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಧೂಮಪಾನ, ಮದ್ಯಪಾನ ತಪ್ಪು ಎಂಬ ಸಂದೇಶ ಹಾಕುವುದರ ಜೊತೆಗೆ, ಸರ್ಕಾರ ಸಿನಿಮಾ ನಿರ್ಮಾಪಕರ ಹತ್ತಿರವೇ ಜಿಎಸ್‌ಟಿ ತಗಲುತ್ತಿದೆ, ಇನ್ಕಮ್ ಟ್ಯಾಕ್ಸ್ ತಗಲುತ್ತಿದೆ, ಸರ್ವಿಸ್ ಟ್ಯಾಕ್ಸ್ ತಗಲುತ್ತಿದೆ. ಆದರೆ ಸಿನಿಮಾ ನಿರ್ಮಾಪಕರಿಗೆ ಸರ್ಕಾರ ತಾನು ಗಳಿಸುವ ಲಾಭದಲ್ಲಿ ಒಂದು ಅಂಶವನ್ನೂ ಸಹ ಕೊಡುವುದಿಲ್ಲ. ನಿಮಗೆ ಬೇಕಾದ ಲಾಭಕ್ಕಾಗಿ ಸಿನಿಮಾದ ನಿರ್ಮಾಪಕರಿಗೆ ಯಾಕೆ ಹೊರೆ ಮಾಡ್ತೀರಿ? ಸಿನಿಮಾದ ತತ್ವ ಸಿದ್ಧಾಂತಗಳು ಏನಿದೆ? ಚಿತ್ರರಂಗದ್ದು ಅದು ಅವತ್ತಿನಿಂದ ಇವತ್ತಿನವರೆಗೂ; ಈಗ ಸಣ್ಣ ಪುಟ್ಟ ಬದಲಾವಣೆಗಳನ್ನು ನೀವು ಮಾಡಿಕೊಂಡಿರಬಹುದು, ಆದರೆ ಅವತ್ತಿನಿಂದ ಹಿಡಿದು ಇವತ್ತಿನವರೆಗೆ ನಿಮ್ಮ ಬದಲಾವಣೆಗಳು ಸಿನಿಮಾದಲ್ಲಿರುವ ನೀತಿಯಲ್ಲಿ ಆಗಲಿಲ್ಲ, ಬರೀ ನಿರ್ಮಾಪಕನಿಂದ ವಸೂಲಿ ಮಾಡುವುದರಲ್ಲಿ ಮಾತ್ರ ಆಗಿದೆ. ನಮ್ಮ ಇಡೀ ಚಿತ್ರರಂಗ ಇದರ ಬಗ್ಗೆ ಹೋರಾಟ ಮಾಡಬೇಕು.

ಚಿತ್ರಮಂದಿರಗಳಲ್ಲಿ ಯಾಕೆ ಒಬ್ಬ ಹೊಸ ನಿರ್ಮಾಪಕ ಬರುತ್ತಾನೋ ಅಥವಾ ಹೊಸ ನಿರ್ದೇಶಕ ಬರುತ್ತಾನೋ, ಅವರ ಚಿತ್ರಗಳನ್ನು ಎಲ್ಲ ಚಿತ್ರಮಂದಿರಗಳಲ್ಲಿ ಹಾಕುವುದಿಲ್ಲ? ಎಲ್ಲಾ ಚಿತ್ರಮಂದಿರಗಳಲ್ಲೂ ಅವಕಾಶ ಕೊಡಬೇಕು. ನೀವು ಕೊಡದಿದ್ದರೆ, ಅವನು ಹೊಸ ಸಿನಿಮಾ, ಹೊಸ ಕಲಾವಿದ ಅಥವಾ ಹೊಸ ಡೈರೆಕ್ಟರ್ ಆಗಿದ್ದರೂ ದೂರ ಇಟ್ಟರೆ ಲಾಸ್ ಆಗುವುದು ಚಿತ್ರರಂಗಕ್ಕೆ; ನಿಮಗೆ ಮಾತ್ರ ಅಲ್ಲ. ನೀವು ಯಾವಾಗಲೂ ದೊಡ್ಡ ಹೀರೋಗಳೇ ಇರಬೇಕು, ದೊಡ್ಡ ಡೈರೆಕ್ಟರ್‌ಗಳೇ ಇರಬೇಕು, ದೊಡ್ಡ ಪ್ರೊಡ್ಯೂಸರ್ ಇರಬಹುದು ಅಥವಾ ದೊಡ್ಡ ಅದ್ದೂರಿ ಸಿನಿಮಾಗಳು ಇರಬೇಕು ಅಂತಲೇ ಕೂತರೆ, ನಮ್ಮಲ್ಲಿ ಬರುವಂತಹ ಅನೇಕ ಸಣ್ಣ ಪುಟ್ಟ ನಿರ್ಮಾಪಕರು, ನಿರ್ದೇಶಕರು ಅಥವಾ ಕಲಾವಿದರು ಇರಬಹುದು; ಅವರ ಪ್ರತಿಭೆಯನ್ನು ತೋರಿಸುವುದು ಹೇಗೆ? ಆಮೇಲೆ ಅವರ ಸಿನಿಮಾ ನೋಡದೆಯೇ ಅದು ಸಿನಿಮಾ ಚೆನ್ನಾಗಿಲ್ಲ ಎಂದು ನೀವು ಹೇಗೆ ನಿರ್ಧರಿಸುತ್ತೀರಿ? ಒಂದು ಸಾರಿ ಸಿನಿಮಾವನ್ನು ನೋಡಿ, ಸಿನಿಮಾ ಖಂಡಿತವಾಗಿಯೂ ಚೆನ್ನಾಗಿ ಮಾಡಿರುತ್ತಾರೆ, ಯಾಕೆಂದರೆ ಅವರು ಎಲ್ಲರೂ ಸಿನಿಮಾ ನೋಡಬೇಕು ಎಂದು ಮಾಡಿರುತ್ತಾರೆ; ಅವರು ವೈಯಕ್ತಿಕವಾಗಿ ಅವರಿಗೋಸ್ಕರವೇ ಮಾಡಿಲ್ಲ. ಅದರಿಂದ ಚಿತ್ರಮಂದಿರಗಳಾಗಲಿ ಅಥವಾ ಇತರರು ಕೂಡ ಬೆಂಬಲ ನೀಡಬೇಕು.
ಸರ್ಕಾರದ ಬಜೆಟ್ ನಲ್ಲಿ ಸಿನಿಮಾ ರಂಗಕ್ಕೂ ಪಾಲು ಸಿಗಲಿ
ಸೆಂಟ್ರಲ್ ಗವರ್ನಮೆಂಟ್ ಇರಬಹುದು ಅಥವಾ ಸ್ಟೇಟ್ ಇರಬಹುದು, ನಿಮ್ಮ ಬಜೆಟ್‌ನಲ್ಲಿ ಸಿನಿಮಾ ರಂಗಕ್ಕೆ ಏನು ಕೊಡುತ್ತಿದ್ದೀರಿ ಎಂಬುದು ನನಗೆ ಗೊತ್ತಿಲ್ಲ. ನಾನು ಎಷ್ಟು ಬಾರಿ ಕೇಂದ್ರ ಸರ್ಕಾರದ ಬಜೆಟ್ ನೋಡಿದ್ದೇನೆಂದರೆ, ಸಿನಿಮಾ ರಂಗಕ್ಕೆ ಅಂತ ಏನೂ ಇರುವುದಿಲ್ಲ. ಸಿನಿಮಾ ರಂಗಕ್ಕೆ ಅಂತ ಒಂದು ಬಜೆಟ್ ಅನ್ನು ನೀವು ಇಲ್ಲಿವರೆಗೆ ಇಟ್ಟಿದ್ದೀರಾ ಎಂಬುದು ನಮಗೆ ಗೊತ್ತಿಲ್ಲ. ನೀವು ಸಿನಿಮಾ ರಂಗದಿಂದ ಲಾಭ ಪಡೆಯುತ್ತೀರಿ, ಹಾಗೆಯೇ ಸಿನಿಮಾ ರಂಗಕ್ಕೂ ಒಂದು ಕೊಡುಗೆಯನ್ನು ನೀಡಿ. ಉದಾಹರಣೆಗೆ, ಚುನಾವಣೆ ಬರುವಾಗ ಜನರಿಗೆ ಗೆಲ್ಲಲು ಅಧಿಕಾರ ಪಡೆಯುವ ಉದ್ದೇಶದಿಂದ ಏನೇನೋ ಆಫರ್‌ಗಳನ್ನು ನೀಡುತ್ತೀರಿ. ಸಿನಿಮಾ ರಂಗವು ಇಷ್ಟು ಲಾಭ ಪಡೆದರೆ, ಸಿನಿಮಾ ರಂಗದವರಿಗೆ ಏನು? ಇಲ್ಲಿ 50-60 ವರ್ಷ ಕೆಲಸ ಮಾಡಿದವರು ಇದ್ದಾರೆ, ಅವರಿಗೆ ಇಲ್ಲಿವರೆಗೆ ಏನಾದರೂ ಒಂದು ಸಿನಿಮಾದ ಸೌಲಭ್ಯ ಅಥವಾ ಅನುಕೂಲ ಮಾಡಿಕೊಡಬಹುದಿತ್ತು. ಅದರ ಬಗ್ಗೆ ನೀವು ಯಾರು ಯೋಚನೆ ಮಾಡುವುದಿಲ್ಲ. ನಾವು ಎಷ್ಟು ಪತ್ರ ಬರೆದರೂ ಅದು ಉಪಯೋಗಕ್ಕೆ ಬರುವುದಿಲ್ಲ.
ಬಾಕಿ ಉಳಿಸಿಕೊಂಡ ಸಬ್ಸಿಡಿ ಹಣ ಬಿಡುಗಡೆ ಮಾಡಿ
ಸಿನಿಮಾ ರಂಗದಲ್ಲಿ 2026 ರಿಂದ ಸಬ್ಸಿಡಿ ನಿಲ್ಲಿಸಬೇಕು ಎಂಬ ಮಾತು ಒಂದು ಕಡೆಯಿಂದ ಕೇಳಿಬರುತ್ತಿತ್ತು, ಹಾಗೆಯೇ ಸರ್ಕಾರ ಕೂಡ ಅದಕ್ಕೆ ಒಪ್ಪಿಗೆ ನೀಡಿದಂತ ಮಾತು ಕೇಳಿಬರುತ್ತಿತ್ತು. ಆದರೆ ಇತ್ತೀಚೆಗೆ ನಮ್ಮ ಕರ್ನಾಟಕ ಸರ್ಕಾರವು 20 ಕೋಟಿ ಸಬ್ಸಿಡಿ ಹಣವನ್ನು ನೀಡಿದೆ ಎಂದು ತಿಳಿದುಬಂದಿದೆ; ಹಾಗೆಂದು ಸರ್ಕಾರ ಸಬ್ಸಿಡಿ ನೀಡುವುದನ್ನು ನಿಲ್ಲಿಸಿಲ್ಲ ಎಂದು ಸಮಾಧಾನ ಮಾಡಿಕೊಳ್ಳುವಂತಿಲ್ಲ. ಇಲ್ಲಿವರೆಗೆ ನಮಗೆ 22, 23, 24, 25ರ ಸಬ್ಸಿಡಿಯೇ ಬರಲಿಲ್ಲ, ಇನ್ನು ಕಮಿಟಿ ಕೂಡ ಆಗಿಲ್ಲ. ನೀವು ನಾಲ್ಕೈದು ವರ್ಷಗಳಿಂದ ಬಾಕಿ ಇಟ್ಟಿದ್ದೀರಿ; ನಾಲ್ಕು ವರ್ಷಕ್ಕೆ ನಮಗೆ ಕನಿಷ್ಠ 60ರಿಂದ 70 ಕೋಟಿ ರೂಪಾಯಿ ಸಬ್ಸಿಡಿ ಹಣವನ್ನು ಸರ್ಕಾರ ನೀಡಬೇಕಾಗುತ್ತದೆ. ಸರ್ಕಾರ ಬರಿ 20 ಕೋಟಿ ಕೊಟ್ಟಿದೆ, ಅದು ಸಾಲದು. ಇಲ್ಲಿವರೆಗೆ ನಾಲ್ಕು ವರ್ಷದ ಬಾಕಿ ಹಣ ಏನೆಲ್ಲಾ ಪೆಂಡಿಂಗ್ ಇದೆ ಎಂಬುದನ್ನು ನೋಡಬೇಕಿದೆ, ಆ ಬಾಕಿ ಹಣವನ್ನು ನೀಡಬೇಕಿದೆ. ಸರ್ಕಾರ ಕನಿಷ್ಠ 60ರಿಂದ 70 ಕೋಟಿ ರೂಪಾಯಿ ಹಣವನ್ನು ನೀಡಿದರೆ ಮಾತ್ರ ಇಲ್ಲಿವರೆಗಿನ ಸಬ್ಸಿಡಿಯನ್ನು ಕ್ಲಿಯರ್ ಮಾಡಲು ಸಾಧ್ಯವಾಗುತ್ತದೆ; ಅಲ್ಲಿ ಬಂದಿರುವುದು ಬರಿ 20 ಕೋಟಿ ಅಷ್ಟೆ. ಆದಷ್ಟು ಶೀಘ್ರವಾಗಿ ಸಬ್ಸಿಡಿ ಬಾಕಿಯನ್ನು ಕ್ಲಿಯರ್ ಮಾಡಬೇಕು.

.್
ಹೊಸ ಮುಖ್ಯಮಂತ್ರಿಗಳ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರಿಗೂ ಕೂಡ ನಾವು ಮನವಿ ಮಾಡುತ್ತೇವೆ, ಆದಷ್ಟು ಬೇಗ ಸಬ್ಸಿಡಿ ಬಾಕಿಯನ್ನು ಬಿಡುಗಡೆ ಮಾಡಬೇಕು. ಜೊತೆಗೆ, 125 ಸಿನಿಮಾಗಳಿಗೆ ನೀವು ಸಬ್ಸಿಡಿ ಕೊಡುತ್ತೀರಾ? ಅದನ್ನರಿಗಿಂತ ಖಂಡಿತವಾಗಿಯೂ ಕನಿಷ್ಠ 200 ಸಿನಿಮಾಗಳಿಗೆ ಸಬ್ಸಿಡಿ ಕೊಡಬೇಕು ಎಂದು ನಾವು ಮನವಿ ಮಾಡುತ್ತೇವೆ. ಇವಾಗ ಕನಿಷ್ಠ ವರ್ಷಕ್ಕೆ 400 ಸಿನಿಮಾಗಳು ಆಗುತ್ತವೆ, ಅದರಲ್ಲಿ ಕನಿಷ್ಠ ವರ್ಷಕ್ಕೆ 200 ಸಿನಿಮಾಗಳಿಗೆ ಸಬ್ಸಿಡಿ ಕೊಡಬೇಕು. ನಮ್ಮ ಎಲ್ಲಾ ಸಿನಿಮಾ ವರ್ಗದವರು ಇದಕ್ಕಾಗಿ ಪ್ರಯತ್ನ ಮಾಡಬೇಕು.
ಹೊಸ ನಿರ್ದೇಶಕರಿಗೆ ಮಾರ್ಗದರ್ಶನ
ಹೊಸ ನಿರ್ದೇಶಕರು, ಶಾರ್ಟ್ ಫಿಲ್ಮ್ ಮಾಡಿದವರು ಡೈರೆಕ್ಟರ್ ಆಗಿ ಬರುತ್ತಾರೆ, ಇನ್ನು ಕೆಲವರು ನೇರವಾಗಿ ಡೈರೆಕ್ಟರ್ ಆಗಿ ಬರುತ್ತಾರೆ. ಕೆಲವರು ಸೋಲುತ್ತಾರೆ. ಹಿಂದೆ ಒಂದು ಸಿನಿಮಾ ಆಗಬೇಕಾಗಿದ್ದರೆ, ಒಬ್ಬ ನಿರ್ದೇಶಕ ಒಬ್ಬ ಬರಹಗಾರನ ಬಳಿ ಅಂದರೆ ಒಬ್ಬ ಲೇಖಕನ ಬಳಿ ಕೂತ್ಕೊಂಡು, ‘ಏನು ಮಾಡ್ತೀರಿ? ಹೇಗೆ ಮಾಡಬಹುದು? ನಾನು ಈ ರೀತಿ ಒಂದು ಸಿನಿಮಾ ಮಾಡ್ತೀನಿ’ ಎಂದು ಚರ್ಚೆಗಳನ್ನು ಮಾಡುವಂತಹ ಒಂದು ಕಾಲವಿತ್ತು. ಆಮೇಲೆ ಐದಾರು ಜನ ಆದರೂ ಮಿನಿಮಮ್ ಕೂತ್ಕೊಂಡು, ‘ಈ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ’ ಅನ್ನೋದು ಇತ್ತು. ಈಗಿನ ಕೆಲವು ಹೊಸ ನಿರ್ದೇಶಕರಿಗೆ ನಾವು ಹೇಗೆ ಅವರನ್ನ ರೀಚ್ ಮಾಡೋದು, ಹೇಗೆ ಹೋಗಿ ಮಾತಾಡೋದು ಅನ್ನೋದು ಪ್ರಶ್ನೆಯಿರಬಹುದು. ಅದಕ್ಕೆಲ್ಲ ನಾವು—ನೀವು ಯಾರೇ ಹೊಸ ನಿರ್ದೇಶಕರಾಗಿ ಬಂದು, ನಮಗೆ ಇಂತ ಇಂತವರನ್ನು ರೀಚ್ ಮಾಡಬೇಕು, ಇಂತವರನ್ನು ಭೇಟಿಯಾಗಬೇಕು, ಇಂತವರ ಜೊತೆ ಕೂತ್ಕೊಂಡು ನಾವು ಕಥೆ ಮಾಡಬೇಕು ಅನ್ನುವ ಆಶಯ ನಿಮಗೆ ಇದ್ದರೆ, ಖಂಡಿತವಾಗಿ ನಮಗೆ ಅದಕ್ಕೆ ನಾವು ವೇದಿಕೆ ಕಲ್ಪಿಸಿಕೊಡುತ್ತೇವೆ.
ನಿರ್ದೇಶಕರ ಸಂಘದ ಮುಖಾಂತರ. ಆದರೆ ದಯವಿಟ್ಟು ಯಾರೇ ಹೊಸ ನಿರ್ದೇಶಕರಾಗಿ ಬಂದರೂ, ಕನಿಷ್ಠ ಒಂದು ಆರು ತಿಂಗಳು ಅಥವಾ ಒಂದು ವರ್ಷ ಸ್ಕ್ರಿಪ್ಟ್ ಬಗ್ಗೆ ಒಳ್ಳೆ ಒಳ್ಳೆ ಲೇಖಕರನ್ನು ಕೂರಿಸಿಕೊಂಡು, ನೀವು ಐದಾರು ಜನ ಮಿನಿಮಮ್ ಆದರೂ ಕೂತ್ಕೊಂಡು ಅದರ ಬಗ್ಗೆ ಚರ್ಚೆ ಮಾಡಿ ಸಿನಿಮಾವನ್ನು ಅಚ್ಚುಕಟ್ಟಾಗಿ ದಡ ಸೇರಿಸುವಂತಹ ಕೆಲಸವನ್ನು ಮಾಡಬೇಕು. ಜೊತೆಗೆ ಆ ನಿರ್ಮಾಪಕರಿಗೂ ಕೂಡ, ‘ಈ ರೇಂಜ್‌ನಲ್ಲಿ ನಾವು ಸಿನಿಮಾ ಮಾಡಿದರೆ ಖಂಡಿತ ಗೆಲ್ಲುತ್ತೇವೆ’ ಅನ್ನೋ ಮನವರಿಕೆಯನ್ನು ಮಾಡಬೇಕು. ಅದಕ್ಕಾಗಿ ನೀವು ಚಿತ್ರವನ್ನು ಗೆಲ್ಲಿಸುವಂತಹ ಪ್ರಯತ್ನ ಮಾಡುವಾಗ, ನಮ್ಮ ಚಿತ್ರರಂಗದಲ್ಲಿ ಅಲ್ಮೋಸ್ಟ್ ಎಲ್ಲರೂ ಸಪೋರ್ಟ್ ಮಾಡಲು ರೆಡಿ ಇದ್ದಾರೆ. ಅದರಿಂದ ದಯವಿಟ್ಟು ನೀವು ಮೊದಲು ನಿರ್ದೇಶನಕ್ಕೆ ಇಳಿಯುವ ಮುಂಚೆ ನಿಮ್ಮ ಸ್ಕ್ರಿಪ್ಟ್ ಅನ್ನು—ನಾವು ಹೇಗೆ ನೀರನ್ನು ಫಿಲ್ಟರ್ ಮಾಡುತ್ತೇವೋ, ಆ ಫಿಲ್ಟರ್ ಮಾಡುವಂತೆಯೇ ನಾವು ಸ್ಕ್ರಿಪ್ಟ್ ಅನ್ನು ಕೂಡ—ಕಥೆ ಏನದು ಮತ್ತು ಸ್ಕ್ರೀನ್ ಪ್ಲೇ ಮಾಡುವ ಸಂದರ್ಭದಲ್ಲಿ ಎಲ್ಲರೊಂದಿಗೆ ಕೂತು ಚರ್ಚಿಸಿ, ಅದನ್ನ ಫುಲ್ ಫಿಲ್ಟರ್ ಮಾಡಿ, ಏನು ಬೇಕೋ ಅದನ್ನ ಮಾತ್ರ ಇಟ್ಟುಕೊಂಡು ಸಿನಿಮಾ ಮಾಡಿದರೆ ಖಂಡಿತವಾಗಿಯೂ ನೀವು ಗೆಲ್ಲುತ್ತೀರಿ, ಚಿತ್ರರಂಗಕ್ಕೂ ಹೆಸರು ಬರುತ್ತೆ, ಚಿತ್ರರಂಗ ಉಳಿಯುತ್ತದೆ ಮತ್ತು ಎಲ್ಲರಿಗೂ ಒಳ್ಳೆಯದಾಗುತ್ತದೆ.
ನಿರ್ದೇಶಕರ ಸಂಘದ ಹಿನ್ನೆಲೆ
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವಾದ ನಮ್ಮ ನಿರ್ದೇಶಕರ ಸಂಘವು ಸ್ಥಾಪನೆಯಾಗಿ ಸುಮಾರು 42 ವರ್ಷಗಳು ಕಾಲ ನಡೆದು ಬರ್ತಾ ಇದೆ. ಇದನ್ನು 1984 ರಲ್ಲಿ ನಮ್ಮ ಭಾರತೀಯ ಚಿತ್ರರಂಗದ ದಿಗ್ಗಜ ಹಿರಿಯ ನಿರ್ದೇಶಕ ಪುಟ್ಟನ್ನ ಕನಗಾಲ ಅವರು, ಅವರೊಂದಿಗೆ ಸಿದ್ದಲಿಂಗಯ್ಯನವರು, ಲಕ್ಷ್ಮಿನಾರಾಯಣ ಅವರು, ನಾಗಾಭರಣ ಅವರು ಹಾಗೂ ರಾಜೇಂದ್ರ ಸಿಂಗ್ ಬಾಬು ಅವರು ಹೀಗೆ ಹಿರಿಯ ನಿರ್ದೇಶಕರು ಒಟ್ಟಾಗಿ ಸೇರಿ ಸ್ಥಾಪಿಸಿದ ಒಂದು ಸಂಸ್ಥೆಯಂತಿರುವ ನಮ್ಮ ಸಂಘಕ್ಕೆ ನಾವು ‘ಕಾನ್ಫಿಡಾ’ ಎಂದು ಕರೀತೀವಿ. ಕಾನ್ಫಿಡಾ ಅಂದರೆ ಒಂದು ಕಾಲದಲ್ಲಿ ಬಹಳ ಹೆಸರುವಾಸಿ ಆಗಿದ್ದ ಸಂಘ; ಸ್ವಲ್ಪ ಕಾರಣಾಂತರಗಳಿಂದ ಸಂಘವನ್ನು ನಡೆಸುವವರಲ್ಲಿ ಸಮಸ್ಯೆಗಳಿದ್ದಿರಬಹುದು, ಆದರೆ ಈಗ ಸಂಘವು ಮತ್ತೆ ಅದೇ ರೀತಿ ಚೇತರಿಸಿಕೊಂಡಿದೆ. ಎಲ್ಲಾ ಕಡೆಗಳಲ್ಲಿಯೂ ಅಂದರೆ ಈಗ ಒಂದು ಅಕಾಡೆಮಿ ಇರಬಹುದು, ವಾರ್ತೆ ಇಲಾಖೆ ಇರಬಹುದು, ಸರ್ಕಾರದಲ್ಲಿ ಇರಬಹುದು ಅಥವಾ ಇತರ ಸಂಘ-ಸಂಸ್ಥೆಗಳೊಂದಿಗೆ ಇರಬಹುದು, ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ನಾವು ಕಾರ್ಯನಿರ್ವಹಿಸುತ್ತಾ ಬರ್ತಾ ಇದ್ದೇವೆ.
ಒಗ್ಗಟ್ಟಾಗಿ ಹೋರಾಡಿದರೆ ಯಶಸ್ಸು
ಎಲ್ಲಾ ಸಂಘ ಸಂಸ್ಥೆಗಳು ಒಟ್ಟುಗೂಡಿಕೊಂಡು, ಏನು ಮಾಡಬೇಕು ಅನ್ನುವ ನಿರ್ಣಯವನ್ನು ತಗೊಂಡು, ಎಲ್ಲರೂ ಸೇರಿ ಎಲ್ಲರ ಮಾತನ್ನು ಕೇಳಿ ಕಾರ್ಯನಿರ್ವಹಿಸಿದರೆ ಖಂಡಿತವಾಗಿಯೂ ನಮ್ಮ ಚಿತ್ರರಂಗದ ಸಮಸ್ಯೆಯನ್ನು ದೂರ ಮಾಡಬಹುದು.




