ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಬಂದಿದೆ. ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.

ಪ್ರತಿ ವರ್ಷ ಸುದೀಪ್ ಹುಟ್ಟುಹಬ್ಬದಂದು ಸಾವಿರಾರು ಅಭಿಮಾನಿಗಳು ಅವರ ನಿವಾಸದ ಬಳಿ ಜಮಾಯಿಸಿ ಕೇಕ್ ಕತ್ತರಿಸಿ, ಹಾರ ಹಾಕಿ, ಉಡುಗೊರೆ ನೀಡಿ ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಅಂತಹ ಯಾವುದೇ ಸಂಭ್ರಮ ಇರುವುದಿಲ್ಲ. ಈ ಕುರಿತು ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ದೀರ್ಘ ಪತ್ರ ಬರೆದಿದ್ದಾರೆ.
ಕಳೆದ 30 ವರ್ಷಗಳಿಂದ ಸೆಪ್ಟೆಂಬರ್ 2 ಅನ್ನು ತಮ್ಮ ಮೇಲಿನ ಅಭಿಮಾನಿಗಳ ಪ್ರೀತಿಯೇ ವಿಶೇಷ ದಿನವನ್ನಾಗಿ ಮಾಡಿದೆ ಎಂದು ಸುದೀಪ್ ಹೇಳಿದ್ದಾರೆ. ಸಿನಿಮಾ, ಬಿಗ್ಬಾಸ್ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ತಮಗೆ ಅಭಿಮಾನಿಗಳು ನೀಡಿರುವ ಪ್ರೀತಿ ಮತ್ತು ಪ್ರೋತ್ಸಾಹವೇ ತಮ್ಮ ಶ್ರೀರಕ್ಷೆ ಎಂದಿದ್ದಾರೆ.
ಆದರೆ ವೈಯಕ್ತಿಕ ಹಾಗೂ ಬಲವಾದ ಕಾರಣಗಳಿಂದ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಸುದೀಪ್ ತಿಳಿಸಿದ್ದಾರೆ. ತಮ್ಮ ನಿವಾಸದ ಬಳಿಯೂ ಅಭಿಮಾನಿಗಳಿಗೆ ಲಭ್ಯವಿರುವುದಿಲ್ಲ. ಹುಟ್ಟುಹಬ್ಬದ ಹೆಸರಿನಲ್ಲಿ ಗದ್ದಲ, ಸಂಭ್ರಮಕ್ಕಿಂತ ತಮ್ಮ ತಮ್ಮ ಊರುಗಳಲ್ಲಿ ಅಭಿಮಾನಿಗಳು ನಡೆಸುವ ಸಾಮಾಜಿಕ ಕಾರ್ಯಗಳೇ ನಿಜವಾದ ಆಚರಣೆ ಎಂದು ಹೇಳಿದ್ದಾರೆ.
ಅಭಿಮಾನಿಗಳು ನೀಡುವ ಉಡುಗೊರೆಗಳನ್ನು ಸಮಾಜದ ಒಳಿತಿಗಾಗಿ ಸದ್ವಿನಿಯೋಗ ಮಾಡಬೇಕು ಎಂದು ಮನವಿ ಮಾಡಿರುವ ಕಿಚ್ಚ, ತಮ್ಮ ಮೇಲಿನ ಪ್ರೀತಿ ಮತ್ತು ಹಾರೈಕೆಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದೇ ವೇಳೆ ಚಿತ್ರರಂಗಕ್ಕೆ ತಮ್ಮ 30 ವರ್ಷಗಳ ಪಯಣವನ್ನು ನೆನಪಿಸಿಕೊಂಡಿರುವ ಸುದೀಪ್, ಸಿನಿಮಾ ತಮ್ಮ ಪರಮ ಕಾಯಕ ಎಂದು ಹೇಳಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಕನ್ನಡ ಭಾಷೆಯೊಂದಿಗೆ ತಮ್ಮ ನಂಟನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.
ತಮ್ಮದೇ ಸಿನಿಮಾದ ಸಂಭಾಷಣೆಯನ್ನು ಉಲ್ಲೇಖಿಸಿರುವ ಸುದೀಪ್, ತಾವು ಸುಮ್ಮನೆ ಕುಳಿತಿಲ್ಲ, ಮುಂದಿನ ಬೇಟೆಗೆ ಸಿದ್ಧವಾಗಿದ್ದೇನೆ ಎಂಬ ಅರ್ಥದಲ್ಲಿ ಅಭಿಮಾನಿಗಳಿಗೆ ಸುಳಿವು ನೀಡಿದ್ದಾರೆ.
ಅಭಿಮಾನಿಗಳನ್ನು ರಂಜಿಸುವ ವಿಚಾರದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಎಂದು ಹೇಳಿರುವ ಕಿಚ್ಚ, ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಅಭಿಮಾನಿಗಳ ಪ್ರೀತಿ ತಮ್ಮೊಂದಿಗೆ ಇದೆ ಎಂದು ಭಾವುಕರಾಗಿದ್ದಾರೆ.




