ವರನಟ ರಾಜ್ ನಂತರ ಮತ್ತೊಮ್ಮೆ ಶ್ರೀಕೃಷ್ಣದೇವರಾಯನಾದ ಕಿಚ್ಚ!

ಸುದೀಪ್ ಹುಟ್ಟುಹಬ್ಬಕ್ಕೆ ಸಾಲು ಸಾಲು ಹೊಸ ಘೋಷಣೆಗಳು!

ನಟ ಸುದೀಪ್ ತಮ್ಮ 53ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪ್ರಪಂಚಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುತ್ತಿದ್ದಾರೆ. ಆದರೆ, ಈ ಬಾರಿ ಸುದೀಪ್ ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ನಟ ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಅವರು ತಮಗೆ ವೈಯುಕ್ತಿಕ ಕಾರಣಗಳಿದೆ ಎಂದು ಇತ್ತೀಚೆಗೆ ನಡೆದ ಬಿಗ್ ಬಾಸ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಆದರೆ ಅವರ ಜನ್ಮ ದಿನವಾದ ಇಂದು ಅವರ ಅಭಿಮಾನಿಗಳಿಗೆ ಅವರ ವಿವಿಧ ಸಿನಿಮಾಗಳ ಹೊಸ ಪೋಸ್ಟರ್, ಘೋಷಣೆಗಳು ಹೊರಬಂದಿರುವುದು ಅವರ ಖುಷಿಯನ್ನು ದುಪ್ಪಟ್ಟಾಗಿಸಿದೆ. ಕೆಲ ದಿನಗಳ ಹಿಂದೆ ಸುದೀಪ್ ಹಂಚಿಕೊಂಡಿದ್ದ ಪೋಸ್ಟ್​​ನಲ್ಲಿ, ‘ಸಿಂಹ ಸುಮ್ಮನೆ ಕೂತಿದೆ ಎಂದರೆ ಸುಸ್ತಾಗಿದೆ ಎಂದಲ್ಲ, ಮುಂದಿನ ಭೇಟೆಗೆ ತಯಾರಾಗಿದೆ ಎಂದರ್ಥ’ ಎಂದಿದ್ದರು. ಸುದೀಪ್ ಅವರು ಹಾಗೆ ಹೇಳಿದ್ದರ ನಿಜವಾದ ಕಾರಣ ಇದುವೇ ಆಗಿದೆ ಎನ್ನೋಣವೆ?
ಸುದೀಪ್ ಕೇವಲ ಕಮರ್ಷಿಯಲ್ ಚಿತ್ರದ ನಾಯಕರಾಗಿ ಬಂದವರಲ್ಲ ಬದಲಿಗೆ ಹಲವಾರು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಶಾಂತಿ ನಿವಾಸ’, ‘ಆಟೋಗ್ರಾಫ್’, ‘ಸ್ವಾತಿ ಮುತ್ತು’, ‘ಮಾತಾಡ್ ಮಾತಾಡ್ ಮಲ್ಲಿಗೆ’ ಇನ್ನೂ ಕೆಲವು ಭಿನ್ನ ಮಾದರಿಯ, ಕಂಟೆಂಟ್ ಆಧರಿತ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ. ಸಾಧಾರಣ ಹಿನ್ನೆಲೆಯಿಂದ ಬಂದು ತಮ್ಮ ಸ್ವಂತ ಪರಿಶ್ರಮ ಹಾಗೂ ಅದ್ಭುತ ನಟನೆಯಿಂದ ಸುದೀಪ್ ಇಂದು ದಕ್ಷಿಣ ಭಾರತದ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ನಾಯಕ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಾಗೂ ಯಶಸ್ವಿ ನಿರೂಪಕನಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿದ್ದಾರೆ. ಇಂದು ಭಾರತೀಯ ಚಿತ್ರರಂಗವೇ ತಿರುಗಿ ನೋಡುವ ಮಟ್ಟಿಗೆ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಾವು ಓರ್ವ ಹೀರೋ ಮಾತ್ರ ಅಲ್ಲ, ಉತ್ತಮ ವಿಲನ್ ಕೂಡ ಹೌದು ಎಂಬುದನ್ನು ಅನೇಕ ಸಿನಿಮಾಗಳ ಮೂಲಕ ಅವರು ಸಾಬೀತು ಮಾಡಿದ್ದಾರೆ.


ಈ ಹಿನ್ನೆಲೆಯಲ್ಲಿ ಈ ಬಾರಿ ಅವರ ಬಹುನಿರೀಕ್ಷಿತ ಚಿತ್ರ “ಬಿಲ್ಲ ರಂಗ ಭಾಷಾ” ಚಿತ್ರದ ಹೊಸ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಹಿಮದಿಂದ ಆವೃತವಾದ ಪ್ರದೇಶದಲ್ಲಿ ವೇಗವಾಗಿ ಸಾಗುತ್ತಿರುವ ಬೈಕ್, ಮೇಲ್ಭಾಗದಲ್ಲಿ ಹಾರುತ್ತಿರುವ ಹೆಲಿಕಾಪ್ಟರ್ ಹಾಗೂ ಬೈಕ್ ಮೇಲೆ ರಗಡ್ ಲುಕ್‌ನಲ್ಲಿ ರೈಡ್ ಮಾಡುತ್ತಿರುವ ಕಿಚ್ಚ ಸುದೀಪ್ ಇದು ಈ ಪೋಸ್ಟರ್ ನಲ್ಲಿರುವ ಪ್ರಧಾನ ಅಂಶ. ವಿಶೇಷ ಎಂದರೆ ಕಿಚ್ಚ ಸುದೀಪ್ ಈವರೆಗೂ ಕಾಣಿಸಿಕೊಂಡಿರದ ವಿಭಿನ್ನ ಹಾಗೂ ಫ್ಯೂಚರಿಸ್ಟಿಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಹಿಮದಿಂದ ಆವೃತವಾದ ಹಿನ್ನೆಲೆಯ ನಡುವೆ ಬೈಕ್ ಚಲಾಯಿಸುತ್ತಿರುವ ಸುದೀಪ್, ಗಾಗಲ್ಸ್ ಹಾಗೂ ವಿಶಿಷ್ಟ ಶೈಲಿಯ ಕೋಟ್ ಧರಿಸಿ ಮಾಸ್ ಲುಕ್‌ನಲ್ಲಿ ಮಿಂಚಿದ್ದಾರೆ. ಪೋಸ್ಟರ್‌ನ ಹಿನ್ನೆಲೆಯಲ್ಲಿರುವ ವಿಮಾನ ಹಾಗೂ ರೈಲು ಪಲ್ಟಿಯಾಗುತ್ತಿರುವ ದೃಶ್ಯಗಳು ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್‌ ಹಾಗೂ ಅದ್ಧೂರಿ ಸಾಹಸ ದೃಶ್ಯಗಳಿರಲಿವೆ ಎಂಬ ಸುಳಿವು ನೀಡಿವೆ. ‘ವಿಕ್ರಾಂತ್ ರೋಣ’ ಯಶಸ್ಸಿನ ಬಳಿಕ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಮ್ಮೆ ಒಂದಾಗಿರುವ ಸಿನಿಮಾ ‘ಬಿಲ್ಲ ರಂಗ ಬಾಷಾ’. ಈ ಕಾಂಬಿನೇಷನ್‌ನ ಎರಡನೇ ಚಿತ್ರವಾಗಿರುವ ಕಾರಣ ಸಹಜವಾಗಿಯೇ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಚಿತ್ರವು ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನರ್ ಆಗಿ ರೂಪುಗೊಳ್ಳುತ್ತಿದೆ. ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ವಿಳಂಬವಾಗಿತ್ತು. ಜೂನ್‌ನಲ್ಲಿ ಮತ್ತೆ ಶೂಟಿಂಗ್ ಆರಂಭಗೊಂಡಿದ್ದು, ಇದೀಗ ಫಸ್ಟ್ ಲುಕ್ ಮೂಲಕ ಚಿತ್ರತಂಡ ಹೊಸ ಅಪ್‌ಡೇಟ್ ನೀಡಿದೆ. ‘ಬಿಲ್ಲ ರಂಗ ಬಾಷಾ’ ಸಿನಿಮಾ 2027ರಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಬರಲು ಸಜ್ಜಾಗುತ್ತಿದೆ.
ಇದರೊಂದಿಗೇ ಸುದೀಪ್ ಹಾಗೂ ತಮಿಳಿನ ಖ್ಯಾತ ನಟ ಮತ್ತು ನಿರ್ದೇಶಕ ಸಮುದ್ರಕಣಿ ನಿರ್ದೇಶನದ ಸಿನಿಮಾ ಸಹ ಘೋಷಣೆ ಆಗಿದೆ. ಸಮುದ್ರಕಣಿ, , ‘ನಾಡೋಡಿಗಳ್’ (ಕನ್ನಡದಲ್ಲಿ ‘ಹುಡುಗರು’), ‘ಪೊರಾಲಿ’ (ಕನ್ನಡದಲ್ಲಿ ಯಾರೇ ಕೂಗಾಡಲಿ) ಸೇರಿದಂತೆ ‘ಅಪ್ಪ’, ‘ಬ್ರೋ’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸಂಪೂರ್ಣ ಕಮರ್ಶಿಯಲ್ ಅಲ್ಲದ ಆದರೆ ಅದ್ಭುತ ಕತೆಯನ್ನು ಒಳಗೊಂಡ ಸಿನಿಮಾಗಳನ್ನು ನಿರ್ದೇಶಿಸುವುದು ಅವರ ಸ್ಟೈಲ್. ಇದೀಗ ಈ ಪ್ರತಿಭಾವಂತ ನಿರ್ದೇಶಕನ ಜೊತೆಗೆ ದೈತ್ಯ ಪ್ರತಿಭೆ ಸುದೀಪ್ ಕೈಜೋಡಿಸಿದ್ದಾರೆ. ಈ ಹೊಸ ಚಿತ್ರಕ್ಕೆ ‘ಸ್ಕೂಲ್ ಬಸ್ ವಾಯ್ಸಸ್’ ಎಂದು ಹೆಸರಿಡಲಾಗಿದೆ. ಇದೊಂದು ಸಂದೇಶ ಹೊಂದಿರುವ ಸಿನಿಮಾ ಎಂಬುದನ್ನು ನಾವು ಊಹಿಸಿಕೊಳ್ಳಬಹುದು. ಒಂದರ ಹಿಂದೊಂದು ಮಾಸ್ ಸಿನಿಮಾಗಳನ್ನು ಮಾಡಿಕೊಂಡೇ ಬಂದಿರುವ ಸುದೀಪ್ ಈಗ ಅವರ ನಟನೆಗೆ ಒರೆಗೆ ಹಚ್ಚುವ ಪಾತ್ರವೊಂದನ್ನು ನಟಿಸಲಿದ್ದಾರೆ ಎಂಬ ನಿರೀಕ್ಷೆ ಹುಟ್ಟಿದೆ.


ಶ್ರೀ ಕೃಷ್ಣದೇವರಾಯನಾಗಿ ಕಿಚ್ಚ
ಇದಷ್ಟೇ ಅಲ್ಲದೆ ಕಿಚ್ಚ ಸುದೀಪ್ ಐತಿಹಾಸಿಕ ಚಿತ್ರದಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದು . ವಿಜಯನಗರ ಸಾಮ್ರಾಜ್ಯದ ಅತ್ಯಂತ ಶ್ರೇಷ್ಠ ಚಕ್ರವರ್ತಿ ಕೃಷ್ಣದೇವರಾಯನ ಭವ್ಯ ಇತಿಹಾಸವನ್ನು ತೆರೆಯ ಮೇಲೆ ತರಲು ಕಿಚ್ಚ ಸುದೀಪ್ ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ “ದೇವರಾಯ” ಎಂದು ಹೆಸರಿಡಲಾಗಿದ್ದು ಈ ಚಿತ್ರದ ವಿಶೇಷ ಪೋಸ್ಟರ್ ಸಹ ಇಂದು ಬಿಡುಗಡೆ ಆಗಿದೆ. ನಟ ಸುದೀಪ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ವಿಶೇಷವಾದ ದಿನದಂದು ಒಂದು ಐತಿಹಾಸಿಕ ಪಾತ್ರ, ಕಾಲವನ್ನು ಮೀರಿ ನಿಲ್ಲುವ ರಾಜನ ಪರಂಪರೆಯನ್ನು ಹಂಚಿಕೊಳ್ಳುತ್ತಿದ್ದೇನೆ. ಶ್ರೀ ಕೃಷ್ಣದೇವರಾಯನ ಈ ಪಯಣದ ಭಾಗವಾಗಲು ಹೆಮ್ಮೆ ಎನಿಸುತ್ತಿದೆ’ ಎಂದು ಬರೆದುಕೊಂಡು ಸಿನಿಮಾದ ಕಾನ್ಸೆಪ್ಟ್ ಟೈಟಲ್ ಅನೌನ್ಸ್‌ಮೆಂಟ್ ವೀಡಿಯೋ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ, ದೇವಸ್ಥಾನಗಳ ಗೋಪುರಗಳು, ಬೃಹತ್ ಆನೆ ಪಡೆಗಳು, ಯುದ್ಧರಂಗ ಹಾಗೂ ರಾಜ ಗಾಂಭೀರ್ಯದಲ್ಲಿ ನಿಲ್ಲುವ ಕಿಚ್ಚ ಸುದೀಪ್ ಅವರ ಲುಕ್ ಅನ್ನು ಕಾಣುತ್ತೇವೆ. ಪ್ರಿಯಾ ಸುದೀಪ್ ಅರ್ಪಣೆಯಲ್ಲಿ ಮೂಡಿಬರುತ್ತಿರುವ ಈ ಐತಿಹಾಸಿಕ ಚಿತ್ರಕ್ಕೆ ಟಿ.ಜಿ. ವಿಶ್ವಪ್ರಸಾದ್‌ ಮತ್ತು ಕೃತಿ ಪ್ರಸಾದ್‌ ಹಣ ಹೂಡುತ್ತಿದ್ದಾರೆ. ತೆಲುಗಿನಲ್ಲಿ ‘ಕಾರ್ತಿಕೇಯ 2’, ‘ಧಮಾಕಾ’, ‘ಬ್ರೋ’ ಹಾಗೂ ಪ್ರಭಾಸ್‌ ಅಭಿನಯದ ‘ದಿ ರಾಜಾ ಸಾಬ್’ ಮುಂತಾದ ಸೂಪರ್ ಹಿಟ್ ಪ್ಯಾನ್-ಇಂಡಿಯಾ ಚಿತ್ರಗಳನ್ನು ನಿರ್ಮಿಸಿ ಸದ್ಧು ಮಾಡಿರುವ ಹೆಸರಾಂತ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ದೊಡ್ಡ ಮಟ್ಟದಲ್ಲಿ ಪದಾರ್ಪಣೆ ಮಾಡುತ್ತಿದೆ. ಆದರೆ ಈ ಚಿತ್ರದ ನಿರ್ದೇಶಕರು ಯಾರೆಂದು ಚಿತ್ರತಂಡ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ. ವಿಎಫ್‌ಎಕ್ಸ್ ಹಾಗೂ ಬೃಹತ್ ಸೆಟ್‌ಗಳ ನಿರ್ಮಾಣಕ್ಕೆ ಹೆಚ್ಚಿನ ಸಮಯಾವಕಾಶ ಅಗತ್ಯವಿರುವುದರಿಂದ, ‘ದೇವರಾಯ’ ಚಿತ್ರವನ್ನು 2027ರ ಡಿಸೆಂಬರ್‌ನಲ್ಲಿ ವಿಶ್ವದ್ಯಂತ ಅದ್ಧೂರಿಯಾಗಿ ತೆರೆಗೆ ತರಲು ಪ್ಲಾನ್ ಮಾಡಲಾಗಿದೆ.


ಡಾ. ರಾಜ್ ಅವರು ಮಾಡಿದ್ದ ಪಾತ್ರ
ನಾವಿಲ್ಲಿ ಗಮನಿಸಬೇಕಾಗಿರುವುದೇನೆಂದರೆ ಶ್ರೀಕೃಷ್ಣದೇವರಾಯ ಚಿತ್ರ ಈ ಹಿಂದೆ ಡಾ. ರಾಜ್‌ಕುಮಾರ್ ಅವರ ಅಭಿನಯದಲ್ಲಿ ಅದ್ಭುತವಾಗಿ ಮೂಡಿಬಂದಿದ್ದು ಅಂದಿನ ಸೂಪರ್ ಹಿಟ್ ಚಿತ್ರವಾಗಿತ್ತು. ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರು ಈ ಐತಿಹಾಸಿಕ ಪಾತ್ರಕ್ಕೆ ಜೀವ ತುಂಬಿದ್ದರು. ಆದರೆ ಇಂದು ಮತ್ತೆ ಅದೇ ಐತಿಹಾಸಿಕ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರನ್ನು ಅದೆಷ್ತರ ಮಟ್ಟಿಗೆ ಆಕರ್ಷಿಸಲಿದೆ ಎನ್ನುವುದು ಸಧ್ಯದ ಕುತೂಹಲವಾಗಿದೆ

support our advertisers
Scroll to Top