ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ, ‘ಅಗ್ನಿಪರೀಕ್ಷೆ’ ಕಾರ್ಯಕ್ರಮದ ಕುರಿತು ಕೇಳಿಬಂದಿರುವ ಟೀಕೆಗಳಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಬಿಗ್‌ಬಾಸ್ ಮನೆ ಪ್ರವೇಶಿಸಲು ಬಯಸುವ ಸಾಮಾನ್ಯ ಸ್ಪರ್ಧಿಗಳನ್ನು ಕಠಿಣ ಟಾಸ್ಕ್‌ಗಳು ಹಾಗೂ ಸಂದರ್ಶನಗಳ ಮೂಲಕ ಆಯ್ಕೆ ಮಾಡುತ್ತಿರುವ ‘ಅಗ್ನಿಪರೀಕ್ಷೆ’ಯಲ್ಲಿ ಆಕಾಂಕ್ಷಿಗಳನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಎದುರಾದಾಗ ಸುದೀಪ್, ‘ಅಗ್ನಿಪರೀಕ್ಷೆಗಳನ್ನು ದಾಟಿ ಬಂದರಷ್ಟೇ ಸ್ವರ್ಗ ಸಿಗುತ್ತದೆ’ ಎಂಬ ಉದಾಹರಣೆ ನೀಡಿದರು. ‘ಅಗ್ನಿಪರೀಕ್ಷೆ’ ಎಂಬ ಹೆಸರೇ ಹೇಳುವಂತೆ ಇದು ಕಠಿಣ ಹಂತವಾಗಿದ್ದು, ಅಲ್ಲಿನ ಜಡ್ಜ್‌ಗಳು ಕೂಡ ತುಸು ಕಠಿಣವಾಗಿಯೇ ಇರಬೇಕಾಗುತ್ತದೆ ಎಂದರು.
ಆದರೆ ಇದೇ ವೇಳೆ ಕಾರ್ಯಕ್ರಮದಲ್ಲಿ ನಡೆದ ಪ್ರತಿಯೊಂದು ವಿಚಾರವನ್ನೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದರು. ಕೆಲವು ವಿಚಾರಗಳನ್ನು ಇನ್ನಷ್ಟು ಸೌಮ್ಯವಾಗಿ ನಿಭಾಯಿಸಬಹುದಿತ್ತು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.
ಕಠಿಣ ಸವಾಲುಗಳನ್ನು ಎದುರಿಸಿದವರು ಮುಂದಿನ ಹಂತಕ್ಕೆ ಬಂದಿದ್ದಾರೆ. ಅವರಲ್ಲಿ ಕೆಲವರು ಬಿಗ್‌ಬಾಸ್ ಮನೆ ಪ್ರವೇಶಿಸಿ ಅಂತಿಮವಾಗಿ ವಿಜೇತರಾಗುವ ಸಾಧ್ಯತೆಯೂ ಇದೆ. ಆದರೆ ಕಷ್ಟವೆಂದು ದೂರುತ್ತಾ ಹಿಂದೆ ಸರಿದವರು ಕಾರ್ಯಕ್ರಮದಿಂದ ಹೊರಬಂದಿದ್ದಾರೆ ಎಂದು ಸುದೀಪ್ ಹೇಳಿದರು.
ಜೀವನದಲ್ಲೂ ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಂದು ಕಷ್ಟಕ್ಕೂ ದೂರುತ್ತಾ ಕುಳಿತರೆ ಅದರ ನಂತರ ಬರುವ ಅವಕಾಶವನ್ನು ಕಳೆದುಕೊಳ್ಳಬಹುದು ಎಂಬ ಸಂದೇಶವನ್ನೂ ಅವರು ನೀಡಿದರು.
ತಮ್ಮ ವೈಯಕ್ತಿಕ ಅನುಭವವನ್ನೂ ಹಂಚಿಕೊಂಡ ಸುದೀಪ್, ಜೀವನದಲ್ಲಿ ತಾವು ಕೂಡ ಹಲವು ಕಠಿಣ ಸಂದರ್ಭ ಹಾಗೂ ಜವಾಬ್ದಾರಿಗಳನ್ನು ಎದುರಿಸಿದ್ದಾಗಿ ಹೇಳಿದರು. ಹಿಂದೆ ಹಿರಿಯರು ಹೇಳುತ್ತಿದ್ದ ಮಾತುಗಳು ಆಗ ಬೈಗುಳದಂತೆ ಅನಿಸುತ್ತಿದ್ದವು. ಆದರೆ ಈಗ ಅವುಗಳ ಹಿಂದಿನ ಉದ್ದೇಶ ಅರ್ಥವಾಗುತ್ತಿದೆ ಎಂದರು.
ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ‘ಅಗ್ನಿಪರೀಕ್ಷೆ’ ಎಂಬ ಹೊಸ ಆಯ್ಕೆ ಪ್ರಕ್ರಿಯೆ ಪರಿಚಯಿಸಲಾಗಿದೆ. ಬಿಗ್‌ಬಾಸ್ ಮನೆ ಪ್ರವೇಶಿಸಲು ಬಯಸುವ ಸಾಮಾನ್ಯರನ್ನು ವಿವಿಧ ಟಾಸ್ಕ್‌ಗಳು ಹಾಗೂ ಸಂದರ್ಶನಗಳ ಮೂಲಕ ಪರೀಕ್ಷಿಸಿ, ಅರ್ಹರನ್ನು ಆಯ್ಕೆ ಮಾಡಲಾಗುತ್ತಿದೆ.
ಈ ಪ್ರಕ್ರಿಯೆಯ ಜಡ್ಜ್‌ಗಳಾಗಿ ವಿನಯ್ ಗೌಡ, ಚಂದನ್ ಗೌಡ, ಸಂಗೀತಾ ಶೃಂಗೇರಿ ಹಾಗೂ ಶ್ರುತಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಡ್ಜ್‌ಗಳು ಆಯ್ಕೆ ಮಾಡುವ ಅರ್ಹ ಸ್ಪರ್ಧಿಗಳಿಗೆ ಸಾಮಾನ್ಯರ ಕೋಟಾದಲ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ಸಿಗಲಿದೆ.

ದರ್ಶನ್ ಹಾಡುಗಳನ್ನು ಹಾಕದಿರಲು ಸೂಚನೆ?
ಇನ್ನು ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಪ್ರತಿದಿನ ಕೇಳಿಬರುವ ಹಾಡುಗಳು ಸ್ಪರ್ಧಿಗಳ ಉತ್ಸಾಹ ಹೆಚ್ಚಿಸುವ ಪ್ರಮುಖ ಅಂಶ. ಆದರೆ ದರ್ಶನ್ ಅಭಿನಯದ ಸಿನಿಮಾಗಳ ಹಾಡುಗಳು ಬಿಗ್‌ಬಾಸ್ ಮನೆಯಲ್ಲಿ ಅಪರೂಪವಾಗಿ ಕೇಳಿಬರುತ್ತವೆ ಎಂಬ ಪ್ರಶ್ನೆಗೆ ಉತ್ತರಿಸಿದ ನಟ , ‘ಇದು ಕಾನೂನು ಪರಿಣಿತಿ ಬೇಡುವ ಪ್ರಶ್ನೆ, ಕಾನೂನು ತಂಡವನ್ನು ಸಂಪರ್ಕಿಸಿ ಉತ್ತರ ಕೊಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು. ಮಾತ್ರವಲ್ಲ ತಮ್ಮ ಮನಸ್ಸಿನಲ್ಲಿ ಯಾರ ಬಗ್ಗೆಯೂ ದ್ವೇಷವಿಲ್ಲ. ಎಲ್ಲರೂ ಚೆನ್ನಾಗಿರಬೇಕು ಎಂಬುದೇ ತಮ್ಮ ಆಶಯ ಎಂದರು. ದರ್ಶನ್ ಅವರ ಹಾಡುಗಳನ್ನು ಬಿಗ್‌ಬಾಸ್ ಮನೆಯಲ್ಲಿ ಹಾಕುತ್ತಿಲ್ಲ ಎಂದಾದರೆ ಅದಕ್ಕೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ನಿರ್ದಿಷ್ಟ ಹಾಡುಗಳನ್ನು ಹಾಕಬಾರದು ಎಂಬ ಒತ್ತಡ ಅಥವಾ ಸೂಚನೆಗಳು ಕೂಡ ಇರಬಹುದು ಎಂದು ಸುದೀಪ್ ಮಾರ್ಮಿಕವಾಗಿ ಹೇಳಿದರು.
ಯಾವುದೇ ಕಲಾವಿದನನ್ನು ತುಳಿಯಬೇಕು ಎಂಬ ಉದ್ದೇಶ ಯಾರಿಗೂ ಇರಬಾರದು ಎಂದ ಸುದೀಪ್, ಯಾರನ್ನಾದರೂ ಕೆಟ್ಟದಾಗಿ ನೋಡಬೇಕೆಂಬ ಅನುಮಾನ ಬಿಟ್ಟು, ಮತ್ತೊಂದು ದೃಷ್ಟಿಕೋನದಿಂದ ಒಳ್ಳೆಯದನ್ನೇ ಬಯಸಬೇಕು ಎಂದು ಹೇಳಿದರು. ಬಿಗ್‌ಬಾಸ್ ಮನೆಯಲ್ಲಿ ಹಲವು ಕನ್ನಡ ನಟರ ಸಿನಿಮಾಗಳ ಹಾಡುಗಳನ್ನು ಬಳಸಲಾಗುತ್ತದೆ. ಆದರೆ ಯಾವ ಕಲಾವಿದರ ಹಾಡು ಹಾಕಬೇಕು, ಯಾರ ಹಾಡು ಹಾಕಬಾರದು ಎಂಬ ಪೂರ್ವಾಗ್ರಹ ಇಲ್ಲ. ನಿರ್ದಿಷ್ಟ ಹಾಡುಗಳನ್ನು ಬಳಸಲು ಅಥವಾ ಬಳಸದಿರಲು ಹಲವು ಕಾರಣಗಳಿರಬಹುದು ಎಂದರು. ಹಾಡುಗಳ ಪ್ರಸಾರದ ವಿಚಾರದಲ್ಲಿ ಕಾಪಿರೈಟ್ ಕೂಡ ಪ್ರಮುಖ ಅಂಶವಾಗಿದೆ. ವಾಹಿನಿ ಅಥವಾ ಕಾರ್ಯಕ್ರಮದ ಬಳಿ ಹಕ್ಕುಗಳು ಲಭ್ಯವಿರುವ ಸಿನಿಮಾಗಳ ಹಾಡುಗಳನ್ನಷ್ಟೇ ಬಳಸಲು ಸಾಧ್ಯವಾಗುತ್ತದೆ ಎಂಬ ಚರ್ಚೆಯೂ ಇದೆ. ಹೀಗಾಗಿ ದರ್ಶನ್ ಸಿನಿಮಾಗಳ ಹಾಡುಗಳು ಬಿಗ್‌ಬಾಸ್ ಮನೆಯಲ್ಲಿ ಕಡಿಮೆ ಕೇಳಿಬರುತ್ತವೆ ಎಂಬುದಕ್ಕೆ ಒಂದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಹಿಂದೆ ಹಲವು ಸಂದರ್ಭಗಳಲ್ಲಿ ದರ್ಶನ್ ಸಿನಿಮಾಗಳ ಹಾಡುಗಳು ಬಿಗ್‌ಬಾಸ್ ಮನೆಯಲ್ಲಿ ಪ್ರಸಾರವಾಗಿರುವುದೂ ಇದೆ.




