MOVIE CAMPUS ವೆಬ್ ಸೈಟ್ ಗೆ ಚಾಲನೆ ಕೊಟ್ಟ ಹಿರಿಯ ನಟಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ

ಹೊಸ ಕನಸು, ಭರವಸೆಯೊಂದಿಗೆ ಮೂವಿ ಕ್ಯಾಂಪಸ್ ವೆಬ್ ಸೈಟ್ ಪ್ರಾರಂಭ

ಚಿತ್ರರಂಗ ಹಾಗೂ ಕಿರುತೆರೆ, ಒಟಿಟಿ ಸೇರಿದಂತೆ ಮನರಂಜನಾ ಕ್ಷೇತ್ರದ ವೈವಿಧ್ಯಮಯ ಸುದ್ದಿಗಳನ್ನು, ವಿಡಿಯೋಗಳನ್ನು ಹಾಗೂ ಮಾಹಿತಿಯನ್ನು ಜನರಿಗೆ ಶೀಘ್ರವಾಗಿ ತಲುಪಿಸುವ ಉದ್ದೇಶದೊಂದಿಗೆ ಮೂವಿ ಕ್ಯಾಂಪಸ್ ವೆಬ್ ಸೈಟ್ ಇತ್ತೀಚೆಗೆ ಪ್ರಾರಂಭವಾಗಿದೆ. ಹಿರಿಯ ನಟಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲಾ ಅವರು ಈ ಹೊಸ ವೆಬ್ ಸೈಟ್‌ಗೆ ಚಾಲನೆ ನೀಡಿ ಶುಭ ಹಾರೈಸಿದರು.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್.ಆರ್. ಕೆ. ವಿಶ್ವನಾಥ್, ಹಿರಿಯ ಚಲನಚಿತ್ರ ಕಲಾವಿದರಾದ ನೀಲಕಂಠ ಅಡಿಗ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಈ ವೆಬ್ ಸೈಟ್‌ಗೆ ಚಾಲನೆ ದೊರೆಯಿತು.

ವೆಬ್ ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಡಾ. ಜಯಮಾಲಾ, “ಮೂವಿ ಕ್ಯಾಂಪಸ್ ವೆಬ್ ಸೈಟ್ ಅತ್ಯಂತ ಒಳ್ಳೆಯದು, ಈ ಸಂದರ್ಭಕ್ಕೆ ನಮ್ಮ ಚಿತ್ರರಂಗಕ್ಕೆ ಬೇಕಾಗಿರುವಂತಹ ವೆಬ್ ಸೈಟ್ ಇದು. ಗೃಹಶೋಭಾ ಪತ್ರಿಕೆಯಲ್ಲಿ ಕೆಲಸ ಮಾಡುವವರು ಮತ್ತು ಸಮಾನ ಮನಸ್ಕರು ಸೇರಿ ಈ ಮೂವಿ ಕ್ಯಾಂಪಸ್ ವೆಬ್ ಸೈಟ್ ಲಾಂಚ್ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವತ್ತಿನ ದಿನ ಇದರ ಅವಶ್ಯಕತೆ ಇದೆ ಎಂದು ನಾನು ಭಾವಿಸುತ್ತೇನೆ.” ಎಂದು ಹೇಳಿದರು.

ಮುಂದುವರಿದು ನಮ್ಮಲ್ಲಿ ಇಂದು ಪೋಸ್ಟರ್ ಗಳನ್ನು ಹಾಕಲು ಸರಿಯಾದ ಜಾಗಗಳಿಲ್ಲ, ವೇದಿಕೆಗಳಿಲ್ಲ, ಇರುವ ಪೋಸ್ಟರ್ ಎಲ್ಲಿ ಪ್ರದರ್ಶನವಾಗಬೇಕೆನ್ನುವುದು ಗೊತ್ತಾಗುತ್ತಿಲ್ಲ, ಸಿನಿಮಾ ಯಾವಾಗ ಬರುತ್ತದೆ ಎಂಬುದು ತಿಳಿಯುತ್ತಿಲ್ಲ. ಹಾಗಾಗಿ ಈ ಸಮಯದಲ್ಲಿ ಇಂತಹ ವೆಬ್ ಸೈಟ್‌ಗಳು ಬಂದು ಸಿನಿಮಾಗಳಿಗೆ ಪ್ರಚಾರ ನೀಡುವುದಾದರೆ ನಮಗೆ ಬಹಳ ನೆರವಾಗಲಿದೆ. ಇದರಲ್ಲಿ ಒಟಿಟಿ ಕೂಡ ಇದೆ, ಚಿತ್ರ ವಿಮರ್ಶೆ ಇರಬಹುದು, ಚಿತ್ರ ತಯಾರಾಗಿ ಬಿಡುಗಡೆಯಾಗುವವರೆಗೆ ಚಿತ್ರರಂಗಕ್ಕೆ ಸಂಬಂಧಿಸಿದ ಹಾಗೂ ಚಿತ್ರಕ್ಕೆ ಅಗತ್ಯವಿರುವ ಎಲ್ಲವೂ ಇದರಲ್ಲಿದೆ. ಮೂವಿ ಕ್ಯಾಂಪಸ್ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಜನರು ಇದನ್ನು ನೋಡುವ ಹಾಗೆ, ಅದಕ್ಕೆ ಬೇಕಾಗಿರುವ ಎಲ್ಲಾ ಮಾಹಿತಿಯನ್ನೂ ಇದರಲ್ಲಿ ನೀಡಿ ಜನರಿಗೆ ಅಗತ್ಯವಿರುವ ಎಲ್ಲಾ ಸುದ್ದಿಗಳನ್ನು ತಲುಪಿಸಿ ಯಶಸ್ವಿಗೊಳಿಸಿ ಎಂದು ನಾನು ಹಾರೈಸುತ್ತೇನೆ. ಎಲ್ಲರಿಗೂ ಒಳಿತಾಗಲಿ.” ಎಂದು ಶುಭ ಕೋರಿದರು.

ಮೂವಿ ಕ್ಯಾಂಪಸ್ ವೆಬ್ ಸೈಟ್‌ನ ರೂವಾರಿಗಳಾದ ಗೃಹಶೋಭಾ ಮಾಸಪತ್ರಿಕೆಯ ಜೊತೆಗೆ ಕೆಲಸ ಮಾಡುತ್ತಿರುವ ಶರತ್ ಚಂದ್ರ ಹಾಗೂ ಸ್ವತಂತ್ರ ಪತ್ರಕರ್ತರಾದ ರಾಘವೇಂದ್ರ ಅಡಿಗ ಅವರು ಈ ಸಮಯದಲ್ಲಿ ಉಪಸ್ಥಿತರಿದ್ದರು.

MOVIE CAMPUS ಜಾಲತಾಣ ಪರಿಚಯ

ಮೂವಿ ಕ್ಯಾಂಪಸ್ ಇದಕ್ಕೆ ಮುನ್ನ “ನಮ್ಮ ಸಿನಿಮಾ” ಎನ್ನುವ ಹೆಸರಿನೊಂದಿಗೆ ಪ್ರಾರಂಭವಾದ ಯೂಟ್ಯೂಬ್ ಚಾನಲ್, ಇಂದು ಮೂವಿ ಕ್ಯಾಂಪಸ್ ಎನ್ನುವ ಹೆಸರಿನೊಂದಿಗೆ ಯೂಟ್ಯೂಬ್ ಹಾಗೂ ವೆಬ್ ಸೈಟ್ ರೂಪದಲ್ಲಿ ಜನರ ಮುಂದೆ ಬಂದಿದೆ. ಶರತ್ ಚಂದ್ರ ಹಾಗೂ ಸ್ವತಂತ್ರ ಪತ್ರಕರ್ತರಾಗಿರುವ ರಾಘವೇಂದ್ರ ಅಡಿಗ ಅವರು ವರ್ಷಗಳ ಹಿಂದೆ “ನಮ್ಮ ಸಿನಿಮಾ” ಹೆಸರಿನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದರು. ಇದು ಕನ್ನಡ ಚಿತ್ರರಂಗದ ವೈವಿಧ್ಯಮಯ ಸುದ್ದಿಗಳನ್ನು ಹಾಗೂ ವಿಡಿಯೋಗಳನ್ನು ಜನರಿಗೆ ತಲುಪಿಸುವ ಉದ್ದೇಶದೊಂದಿಗೆ ಪ್ರಾರಂಭವಾಗಿತ್ತು. ಆದರೆ ಕೆಲವು ಕಾರಣಗಳಿಂದ ಈ ಯೂಟ್ಯೂಬ್ ಚಾನೆಲ್ ಹೆಸರನ್ನು “ಮೂವಿ ಕ್ಯಾಂಪಸ್” ಎಂದು ಬದಲಾಯಿಸಲಾಯಿತು. ಈ ಚಾನೆಲ್ ಮೂಲಕ ಚಿತ್ರರಂಗದಲ್ಲಿ ದಿನನಿತ್ಯ ನಡೆಯುವ ವಿದ್ಯಮಾನಗಳು ಮಾತ್ರವಲ್ಲದೆ, ಹಿರಿಯ ಚಿತ್ರ ಕಲಾವಿದರಾದ ನೀಲಕಂಠ ಅಡಿಗ ಅವರಿಂದ ಚಿತ್ರರಂಗದ ಇತಿಹಾಸದ ಚಿನ್ನದ ಪುಟಗಳ ಕುರಿತ ಮಾಹಿತಿ ಸಹ ತಿಳಿಸುತ್ತಾ ಬರಲಾಗುತ್ತಿದೆ.

ಇದೇಗ ಒಂದು ಹೆಜ್ಜೆ ಮುಂದೆ ಹೋಗಿ ಯೂಟ್ಯೂಬ್ ಚಾನೆಲ್ ಜೊತೆಗೆ ಮೂವಿ ಕ್ಯಾಂಪಸ್ ಹೆಸರಿನಲ್ಲೇ ಹೊಸ ವೆಬ್ ಸೈಟ್ ಒಂದನ್ನು ಸಹ ಪರಿಚಯಿಸಲಾಗುತ್ತಿದೆ. ಈ ವೆಬ್ ಸೈಟ್ ಮೂಲಕ ಕನ್ನಡ ನಾಡಿನ ಜನತೆಗೆ ಚಿತ್ರರಂಗ, ಒಟಿಟಿ, ಕಿರುತೆರೆ ಸೇರಿದಂತೆ ಮನರಂಜನಾ ಕ್ಷೇತ್ರದ ವೈವಿಧ್ಯಮಯ ಸುದ್ದಿಗಳನ್ನು ಅತ್ಯಂತ ಶೀಘ್ರವಾಗಿ ತಲುಪಿಸುವುದು ನಮ್ಮ ಗುರಿಯಾಗಿದೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು, ಪೋಷಕ ಸಹ ಕಲಾವಿದರು, ನೌಕರ ವರ್ಗ ಸೇರಿದಂತೆ ಇಡೀ ಚಿತ್ರೋದ್ಯಮ ಹಾಗೂ ಕನ್ನಡದ ಜನತೆ, ಡಾ. ರಾಜ್‌ಕುಮಾರ್ ಹೇಳಿದಂತೆ ಕನ್ನಡ ಸಿನಿಮಾದ ಅಭಿಮಾನಿ ದೇವರುಗಳು ಈ ಯೂಟ್ಯೂಬ್ ಚಾನೆಲ್ ಹಾಗೂ ವೆಬ್ ಸೈಟ್‌ಗೆ ಸದಾ ತಮ್ಮ ಬೆಂಬಲ ಹಾಗೂ ಸಹಕಾರ ನೀಡುತ್ತಾರೆಂದು ನಾವು ಭಾವಿಸುತ್ತೇವೆ.

support our advertisers
Scroll to Top