ಕನ್ನಡ ಚಿತ್ರರಂಗಕ್ಕೂ ರಾಜಕಾರಣಿಗಳಿಗೂ ಬಹಳ ವರ್ಷಗಳ ನಂಟು. ಅದರಲ್ಲೂ ರಾಜಕೀಯ ಹಿನ್ನಲೆಯಿಂದ ಬಂದವರು ಒಂದಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿ ಗೆದ್ದಿದ್ದಾರೆ ಕೂಡ. ಹೆಚ್. ಡಿ. ಕುಮಾರ ಸ್ವಾಮಿ ಯವರಿಂದ ಹಿಡಿದು ಸಮೃದ್ಧಿ ಮಂಜುನಾಥ್ ವರೆಗೆ ಸಿನಿಮಾ ನಿರ್ಮಾಣದಲ್ಲಿ ರಾಜಕೀಯ ಕುಟುಂಬದಿಂದ ಬಂದವರು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ ಉದಾಹರಣೆಗಳಿವೆ.

ಇದೀಗ ರಾಜಕೀಯ ಹಿನ್ನಲೆಯುಳ್ಳ ಹರ್ಷಿಣಿ ಮೂವೀಸ್ ಮೂಲಕ ಮಾಜಿ ಶಾಸಕ ದೇವಾನಂದ್ ಅವರ ಪುತ್ರಿ ಲತಾಶ್ರೀ ಡಿ. ಸಿ ತಮ್ಮ ಪ್ರಥಮ ಪ್ರಯತ್ನವಾಗಿ ‘ಕಿರುನಗೆ ‘ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಿರುನಗೆ ಒಂದು ಪ್ರೇಮ ಕಥೆಯಾದರೂ ಕೂಡ ಪ್ರೀತಿ ಮಾಡಿ ಸಂಕಷ್ಟಗಳನ್ನು ಎದುರಿಸುವ, ಪೋಷಕರಿಗಿಗಾಗಿ ಪ್ರೀತಿಯನ್ನು ತ್ಯಾಗ ಮಾಡಲು ಹೊರಡುವ ಹೆಣ್ಣಿನ ಕುರಿತಾದ ಕಥೆಯನ್ನು ನಿರ್ಮಾಪಕಿಯೂ ಆಗಿರುವ ಲತಾ ಅವರು ಹೆಣೆದಿದ್ದಾರೆ.

ಬೆಂಗಳೂರು, ಉಡುಪಿ, ವಿಜಾಪುರ, ಮುಂಬೈ ಹಾಗೂ ಗೋವಾದ ಸುಂದರ ತಾಣಗಳಲ್ಲಿ ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿವೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹಿರಿಯ ನಿರ್ಮಾಪಕ ಶ್ರೀ ಎಸ್. ಎ.ಗೋವಿಂದ್ ರಾಜ್ ಮತ್ತು ಡಾ. ರಾಜ್ ಪುತ್ರಿ ಲಷ್ಮಿ ಗೋವಿಂದರಾಜ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು.
.ಈಗಾಗಲೇ ಸತ್ಯಂ ಹಾಗೂ ಕಳೆದ ವರ್ಷ ಬಿಡುಗಡೆಯಾಗಿ ಗಮನ ಸೆಳೆದ ನಿಂಬಿಯಾ ಬನದಾ ಮ್ಯಾಗ ಸೇರಿ 5 ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಅಶೋಕ್ ಕಡಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಕನ್ನಡತಿ, ಸ್ನೇಹದ ಕಡಲಲ್ಲಿ ಸೇರಿ ಒಂದಷ್ಟು ಸೀರಿಯಲ್ ಗಳಲ್ಲಿ ನಟಿಸಿರುವ ವಿಜಯ್ ರಾಜ್ ಈ ಚಿತ್ರದ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿ ನೀಡಿದ್ದಾರೆ. ಹೊಸ ಪ್ರತಿಭೆ ಖುಷ್ಬೂ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಿರಿಯ ಕಲಾವಿದರಾದ ಶ್ರುತಿ, ಮೂಗು ಸುರೇಶ್,ಸುಧಾ ಬೆಳವಾಡಿ ಮುಂತಾದ ಕಲಾವಿದರು ನಟಿಸಿದ್ದಾರೆ. ವಿಶೇಷವೆಂದರೆ ಅನುಪಮ್ ಖೇರ್ ಸಹೋದರ ರಾಜು ಖೇರ್ ಮೊದಲ ಬಾರಿ ಕನ್ನಡದಲ್ಲಿ ನಟಿಸುತ್ತಿದ್ದಾರೆ.ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಬಳಿ ಕೆಲಸ ಮಾಡಿದ ಅನುಭವವಿರುವ ಸುಕೃತ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ನಾಗಾರ್ಜುನ ಶರ್ಮ ಹಾಡುಗಳನ್ನು ಬರೆದಿದ್ದಾರೆ.ಇಬ್ಬರೂ ಕೂಡ ತಮ್ಮ ಕೆಲಸದ ಸಂದರ್ಭದಲ್ಲಿ ಆದ ಅನುಭವಗಳನ್ನು ಹಂಚಿಕೊಂಡರು.

.ಶೀಘ್ರದಲ್ಲೇ ಚಿತ್ರದ ಹಾಡುಗಳು ಪ್ರೇಕ್ಷಕರ ಮುಂದೆ ಬರಲಿವೆ.
ಕಾರ್ಯಕ್ರಮದಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ಎನ್. ಆರ್. ಕೆ. ವಿಶ್ವನಾಥ್ ಅವರು ಭಾಗವಹಿಸಿ ನಿರ್ದೇಶಕರ ಸಂಘದ ಸದಸ್ಯರು ಕೂಡ ಆಗಿರುವ ಅಶೋಕ್ ಕಡಬ ಅವರಿಗೆ ಶುಭ ಕೋರಿದರು.ಈ ಹಿಂದೆ ಅಶೋಕ್ ನಿರ್ದೇಶಿಸಿದ್ದ ನಿಂಬಿಯಾ ಬನದ ಮ್ಯಾಗ ಚಿತ್ರದ ನಾಯಕ ಷಣ್ಮುಖ, ಕಾಂಗ್ರೆಸ್ ಮುಖಂಡ ಭೀಮಣ್ಣ ನಾಯಕ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು.
ಮಾಜಿ ಪ್ರಧಾನಿ ಶ್ರೀ ಎಚ್. ಡಿ. ದೇವೇಗೌಡರ ಆಶೀರ್ವಾದದೊಂದಿಗೆ ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಿಸಲಾಗಿರುವ ‘ಕಿರುನಗೆ ‘ ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.




