ನಾಡಪ್ರಭು ಕೆಂಪೇಗೌಡರ ಬದುಕು ತೆರೆಗೆ; ‘ಕೆಂಪಾಂಬುಧಿ’ ಟೀಸರ್ ರಿಲೀಸ್‌, ಪ್ರೇಮ್‌ಗೆ ಐತಿಹಾಸಿಕ ಪಾತ್ರ

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜೀವನ, ದೂರದೃಷ್ಟಿ ಮತ್ತು ಪರಂಪರೆಯನ್ನು ಆಧರಿಸಿದ ‘ಕೆಂಪಾಂಬುಧಿ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ‘ನೆನಪಿರಲಿ’ ಪ್ರೇಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಐತಿಹಾಸಿಕ ಕಥೆಯನ್ನು ಹೊಸ ತಲೆಮಾರಿಗೆ ತಲುಪಿಸುವ ಪ್ರಯತ್ನವಾಗಿದೆ.

‘ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್’ ಪ್ರಸ್ತುತಪಡಿಸಿರುವ ಈ ಚಿತ್ರಕ್ಕೆ ‘ಹೊಂಬಾಳೆ ಮ್ಯೂಸಿಕ್’ ಸಹಯೋಗ ನೀಡಿದೆ. ರಮೇಶ್ ಬೇಗಾರ್ ನಿರ್ದೇಶನದ ಚಿತ್ರದಲ್ಲಿ ಮೇಘನಾ ಗಾಂವ್ಕರ್, ರಾಜೇಶ್ ನಟರಂಗ, ಸುಧಾ ಬೆಳವಾಡಿ, ನಾಗಶ್ರೀ ಬೇಗಾರ್, ಸಂಯುಕ್ತಾ ಹೊರನಾಡು, ರಾಜೇಂದ್ರ ಕಾರಂತ್, ರಮೇಶ್ ಪಂಡಿತ್, ನಟರಾಜ್ ರಾವ್ ಹಾಗೂ ಬಿ.ಎಲ್. ರವಿಕುಮಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿ ಸಿನಿಮಾ ನಿರ್ಮಾಣವಾಗಿದ್ದು, ಇತಿಹಾಸ, ಜನಪದ, ದಂತಕಥೆ ಹಾಗೂ ಸಾಂಸ್ಕೃತಿಕ ನೆನಪುಗಳನ್ನು ಒಟ್ಟುಗೂಡಿಸಿ ಕೆಂಪೇಗೌಡರ ದೂರದೃಷ್ಟಿಯ ಆಡಳಿತ ಮತ್ತು ಪರಿಸರ ಕಾಳಜಿಯನ್ನು ತೆರೆ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರು, ಕೆಂಪೇಗೌಡರ ಐತಿಹಾಸಿಕ ಕೊಡುಗೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಈ ಚಿತ್ರಕ್ಕೆ ಕೈಜೋಡಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.

ಚಿತ್ರತಂಡದ ಪ್ರಕಾರ, ‘ಕೆಂಪಾಂಬುಧಿ’ ಕೇವಲ ಐತಿಹಾಸಿಕ ಸಿನಿಮಾ ಅಲ್ಲ. ಹಳೆಯ ಹಾಗೂ ಇಂದಿನ ಬೆಂಗಳೂರನ್ನು ಜೋಡಿಸುವ ಕಥೆಯಾಗಿದ್ದು, ‘ಗಾರ್ಡನ್ ಸಿಟಿ’ಯ ಹಸಿರು ಪರಂಪರೆ, ಪರಿಸರ ಸಂರಕ್ಷಣೆ ಮತ್ತು ನಗರದ ಮೂಲ ಮೌಲ್ಯಗಳ ಮಹತ್ವವನ್ನು ಜನರಿಗೆ ನೆನಪಿಸುವ ಪ್ರಯತ್ನವಾಗಿದೆ

support our advertisers
Scroll to Top