ಮಳೆ ಹನಿಯ ಮುದ ನೀಡುವ ಮೋಡ ಕವಿದ ವಾತಾವರಣ!

ಸಿಂಪಲ್ ಸುನಿ ಸಿನಿಮಾ ಗಳೆಂದರೆ ಸಿಂಪಲ್ ಕಥೆ, ಒಂದಷ್ಟು ಕಚಗುಳಿ ಇಡುವ ಸಂಭಾಷಣೆಗಳು, ಒಂದೆರಡು ಮಧುರವಾದ ಹಾಡುಗಳು ಇದು ಅವರ ಸಿನಿಮಾಗಳ ರೆಗ್ಯುಲರ್ ಫಾರ್ಮ್ಯಾಟ್. ಹೆಚ್ಚು ಕಡಿಮೆ ಮೇಲೆ ತಿಳಿಸಿದ ಎಲ್ಲಾ ವಿಷಯಗಳನ್ನು ಒಳಗೊಂಡಿರುವ ‘ಮೋಡ ಕವಿದ ವಾತಾವರಣ ‘ ಚಿತ್ರ ಇವತ್ತು ಬಿಡುಗಡೆಯಾಗಿದೆ.

ಮೀಮ್ ಮಾಡಿಕೊಂಡು ಸೈಕಾಲಜಿ ಕೂಡ ಓದಿಕೊಂಡಿರುವ ನಾಯಕ ಚೆರಿಷ್ (ಶೀಲಂ ) ತನ್ನ ಗರ್ಲ್ ಫ್ರೆಂಡ್ ಸಾತ್ವಿಕಾ (ಸಾತ್ವಿಕಾ ) ಜೊತೆ ಮದುವೆಗೆ ಮುಂಚೆ ಇಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಹಾಗೂ ಮುರಿದು ಹೋಗುವ ಹಂತಕ್ಕೆ ಹೋಗಿ ನಿಂತಿರುವ ಸಂಬಂಧವನ್ನು ಗಟ್ಟಿಗೊಳಿಸಲು ಎರಡು ದಿನದ ಮಟ್ಟಿಗೆ ರೆಸಾರ್ಟ್ ಬುಕ್ ಮಾಡುತ್ತಾನೆ. ಅಲ್ಲಿಗೆ ಬಂದಿರುವ ಎಂಗೇಜ್ಮೆಂಟ್ ಆಗಿರುವ, ಭಾವಿ ಪತಿ ಜೊತೆ ಬಂದಿರುವ ಸೌಪರ್ಣಿಕಾ (ಮೋಕ್ಷಾ ಕುಶಾಲ್ ) ಪರಿಚಯ ನಾಯಕನಿಗಾಗುತ್ತದೆ. ತಂದೆ ತಾಯಿಯ ಒತ್ತಾಯಕ್ಕೆ ಮಣಿದು ಮದುವೆಯಾಗುವ ನಿರ್ಧಾರಕ್ಕೆ ಬಂದಿರುವ ಸೌಪರ್ಣಿಕಾ ಜೊತೆ ನಾಯಕ ಚೆರಿಷ್ ಹತ್ತಿರವಾಗುತ್ತಾನೆ.

ಈ ಮಧ್ಯೆ ಸೌಪರ್ಣಿಕಾಳನ್ನು ಚಿಕ್ಕ ವಯಸ್ಸಿನಿಂದ ಫಾಲೋ ಮಾಡುತ್ತಿರುವ ಸೈಕೋ ಪ್ರೇಮಿ ರೆಸಾರ್ಟ್ ಗೂ ಕಾಲಿಟ್ಟು ತನ್ನ ವರಸೆ ತೋರಿಸುತ್ತಾನೆ. ಚಿತ್ರದ ಕೊನೆಗೆ ಸೌಪರ್ಣಿಕಾ ಆ ಸೈಕೋ ಪ್ರೇಮಿಯಿಂದ ಪಾರಾಗುತ್ತಾಳ? ನಾಯಕ ಯಾರನ್ನು ಮದುವೆಯಾಗುತ್ತಾನೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.

ಮೊದಲರ್ಧ ಲವಲವಿಕೆ ಯಿಂದ ಸಾಗುವ ಚಿತ್ರ ದ್ವಿತೀಯರ್ದ ಅನಿರೀಕ್ಷಿತ ತಿರುವು ಪಡೆಯುತ್ತದೆ. ಆದರೆ ಕ್ಲೈಮಾಕ್ಸ್ ಬರುವಷ್ಟರಲ್ಲಿ ವಿಷಯ ಇಷ್ಟೇನಾ ಅಂತ ಅನಿಸಿಬಿಡುತ್ತದೆ. ಚಿತ್ರದಲ್ಲಿ ಕೈಗೆತ್ತಿಕೊಂಡಿರುವ ಸಬ್ಜೆಕ್ಟ್ ಹೊಸದಲ್ಲದೆ ಇದ್ದರೂ ಕೂಡ ಎರಡು ಗಂಟೆಯೊಳಗೆ ಕಥೆಯನ್ನು ನಿಭಾಯಿಸಿರುವುದು ಮಾತ್ರ ಮೆಚ್ಚುಗೆಯ ವಿಷಯ. ಸಿನಿಮಾದ ಪ್ರತೀ ಫ್ರೇಮ್ ಅಂದವಾಗಿ ಕಾಣಿಸುತ್ತದೆ. ಹೆಚ್ಚಿನ ದೃಶ್ಯಗಳಲ್ಲಿ ಮೋಡಕ್ಕಿಂತ ಮಳೆ ಜಾಸ್ತಿ ಇದ್ದುದರಿಂದ ಕಣ್ಣಿಗೆ ಖುಷಿ ಕೊಡುತ್ತದೆ. ಛಾಯಾಗ್ರಾಹಕ ಸಂತೋಷ್ ರೈ ಪತಾಜೆ ಜೇಡರ ಬಲೆಯನ್ನು ಕೂಡ ಬಿಡದೆ ಒಂದಷ್ಟು ಪ್ರಕೃತಿಯ ರಮಣೀಯ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ

. ಜೂಡಾ ಸ್ಯಾಂಡಿಯವರ ಹಿನ್ನಲೆ ಸಂಗೀತ ಸುಂದರ ದೃಶ್ಯಗಳೊಂದಿಗೆ ಮಿಳಿತವಾಗಿದೆ. ಆದರೆ ಸಿಂಪಲ್ ಸುನಿಯವರ ಚಿತ್ರವಾದುದರಿಂದ ಹಾಡುಗಳು ಇನ್ನಷ್ಟು ಮಾಧುರ್ಯದಿಂದ ಮೂಡಿ ಬರಬೇಕಿತ್ತು. ಸಿಂಪಲ್ ಸುನಿ ಯವರ ಈ ಹಿಂದಿನ ‘ಗತ ವೈಭವ ‘ಚಿತ್ರದಲ್ಲಿ ನಟಿಸಿದ ನಾಯಕ ದುಶ್ಯಂತ್ ತರ ಈ ಚಿತ್ರದಲ್ಲಿ ಕೂಡ ಶೀಲಂ ತನ್ನ ಮೊದಲ ಚಿತ್ರದಲ್ಲಿ ಅನುಭವಿ ನಟನ ತರ ಅಭಿನಯ ನೋಡಬಹುದು.ಈ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು. ಇಷ್ಟು ದಿನ ಗಮನ ಸೆಳೆಯುವ ಪಾತ್ರವನ್ನು ನಿಭಾಯಿಸದೇ ಇದ್ದ ಮೋಕ್ಷಾ ಕುಶಾಲ್ ಅವರಿಗೆ ಈ ಚಿತ್ರದ ಪಾತ್ರ ನಿಜಕ್ಕೂ ಒಂದಷ್ಟು ಅಭಿನಯಕ್ಕೆ ಅವಕಾಶ ನೀಡಿದೆ. ಕ್ಲೈಮಾಕ್ಸ್ ನಲ್ಲಿ ಬರುವ ಒಂದಷ್ಟು ದೃಶ್ಯಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಇನ್ನು ಸಾತ್ವಿಕಾ ಪಾತ್ರಕ್ಕೆ ಅಂತಹ ಅವಕಾಶವಿಲ್ಲದ್ದರೂ,ಒಂದು ಹಾಡು ಮತ್ತು ಒಂದಷ್ಟು ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ಸಂಭಾಷಣೆಗಳು ಸುನಿ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಮುದ ನೀಡದೇ ಇದ್ದರೂ, ಸಿನಿಮಾದ ಕಥೆಗೆ ತಕ್ಕಂತಿದೆ. ಒಟ್ಟಿನಲ್ಲಿ ಸಿಂಪಲ್ ಬಜೆಟ್ ನಲ್ಲಿ ಒಂದಷ್ಟು ಗ್ರಾಂಡ್ ಆಗಿ ಸಿನಿಮಾ ನಿರ್ದೇಶಿಸಿ ಕರಗತ ಮಾಡಿ ಕೊಂಡಿರುವ ಸುನಿಯವರ ಮೋಡ ಕವಿದ ವಾತಾವರಣ ಫ್ಯಾಮಿಲಿ ಸಮೇತ ಕುಳಿತು ಒಮ್ಮೆ ನೋಡಬಹುದಾದ ಚಿತ್ರ ವಾಗಿದೆ.

support our advertisers
Scroll to Top