ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಇಂದು ಮಧ್ಯಾಹ್ನ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ.ಮಂಗಳೂರಿನ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಪ್ರಯಾಣಿಸಿ ಮಧ್ಯಾಹ್ನ ಕೊಲ್ಲೂರು ತಲುಪಿ ಸಂಕಲ್ಪ ಮಾಡಿ ವಿಶೇಷ ಪೂಜೆ ಪುನಸ್ಕಾರ ಮಾಡಿ ವಾಪಸಾಗಿದ್ದಾರೆ.

ತಮಿಳು ನಾಡಿನ ಮುಖ್ಯ ಮಂತ್ರಿಗಳು ಕೊಲ್ಲೂರಿನ ದೇವಿಯ ದರ್ಶನ ಮಾಡುತ್ತಿರುವುದೇನು ಹೊಸದಲ್ಲ. ಈ ಹಿಂದೆ ಎಂ. ಜಿ. ಆರ್. ಅನೇಕ ಬಾರಿ ಇಲ್ಲಿಗೆ ಭೇಟಿ ನೀಡುತ್ತಿದ್ದೂ, ದೇವಿಗೆ ಚಿನ್ನದ ಖಡ್ಗ ಕೂಡ ಮಾಡಿಸಿ, ಮೂಕಾಂಬಿಕೆಯ ಅತೀ ದೊಡ್ಡ ಭಕ್ತರಾಗಿದ್ದರು.ಜಯ ಲಲಿತಾ ಕೂಡ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದೂ 2004 ರಲ್ಲಿ ದೇವಸ್ಥಾನದಲ್ಲಿ ಚಂಡಿಕಾ ಯಾಗ ನಡೆಸಿ ಅನ್ನದಾನ ಮತ್ತು ದೇವಸ್ಥಾನದ ಸೇವೆಗಳಿಗೆ ತಮ್ಮ ಕೊಡುಗೆ ನೀಡಿದ್ದರು.

ಕೊಲ್ಲೂರು ದೇವಸ್ಥಾನಕ್ಕೆ ತಮಿಳು ನಾಡಿನಿಂದ ಬರುವ ಭಕ್ತರ ಸಂಖ್ಯೆ ಅಪಾರ. ಅದರಲ್ಲೂ ಇಳಯರಾಜ ಇಲ್ಲಿಗೆ ಪದೇ ಪದೇ ಬರಲು ಆರಂಭಿಸಿದ ಮೇಲೆ ತಮಿಳು ಭಕ್ತರು ಬರುವುದು ಜಾಸ್ತಿ ಆಯಿತು. ಒಂದು ಸಾರಿ ಸಂದರ್ಶನವೊಂದರಲ್ಲಿ, ತಾನು ಒಂಥರ ಈ ದೇವಸ್ಥಾನದ ಬ್ರಾಂಡ್ ಅಂಬಾಸಿಡರ್ ಅಂತ ತಮಾಷೆಯಾಗಿ ಹೇಳಿಕೊಂಡಿದ್ದರು. ಕನ್ನಡದಲ್ಲಿ ಮೂಕಾಂಬಿಕೆಯ ಕುರಿತಾದ ಇಳಯರಾಜ ಸಂಗೀತ ಸಂಯೋಜಿಸಿ ಹಾಡಿದ ಹಾಡುಗಳು ಈಗಲೂ ಜನಪ್ರಿಯ.

ಒಟ್ಟಿನಲ್ಲಿ ಕ್ರೈಸ್ತ ಧರ್ಮ ಅನುಸರಿಸುತ್ತಿರುವ ವಿಜಯ್ ಈ ಹಿಂದೆ ಶಿರ್ಡಿ ಹಾಗೂ ತಮಿಳು ನಾಡಿನ ದೇವಸ್ಥಾನಗಳನ್ನು ಭೇಟಿ ಮಾಡಿರುವ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.




