2026ರಲ್ಲಿ ಕರ್ನಾಟಕ ಬಾಕ್ಸ್ಆಫೀಸ್ ಆಳುತ್ತಿದ್ದ ಧುರಂಧರನನ್ನೇ ಹಿಂದಿಕ್ಕಿ, ನಂ.1 ಸ್ಥಾನಕ್ಕೇರಿದ ನಮ್ಮ ಪ್ರೇಮದ ಊರಲಿ
KGF2 ನ ಹಿಂದಿಕ್ಕಿದ ಪ್ರೇಮದ ಊರಲಿ ಸಿನಿಮಾ!!
ಸಿನಿಮಾ ಹಿಟ್ ಆದ್ರೆ ಪ್ರವಾಸಿ ತಾಣಕ್ಕೂ ಬಂಪರ್ ಡಿಮ್ಯಾಂಡ್!

ಕನ್ನಡದ ಪ್ರೇಮಕಥೆಯಾಧಾರಿತ ಸಿನಿಮಾ ‘ಪ್ರೇಮದ ಊರಲಿ’ ರಾಜ್ಯದ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. 2026ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಸ್ಥಾನವನ್ನು ಈ ಸಿನಿಮಾ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಅಲ್ಲದೆ, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ‘ಧುರಂಧರ್ 2’ ಚಿತ್ರವನ್ನೂ ಹಿಂದಿಕ್ಕಿದೆ ಎಂಬ ಸುದ್ದಿ ಇದೀಗ ಸಿನಿಮಾ ವಲಯದಲ್ಲಿ ಗಮನ ಸೆಳೆಯುತ್ತಿದೆ.—
ಒಂದು ಕಾಲದಲ್ಲಿ ‘ಮುಂಗಾರು ಮಳೆ’ ಸಿನಿಮಾ ಜೋಗ ಜಲಪಾತದ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಈಗ ಅದೇ ರೀತಿ ‘ಪ್ರೇಮದ ಊರಲಿ’ ಸಿನಿಮಾ ಸದ್ದು ಮಾಡುತ್ತಿದೆ!
ಹಾಸನದ ಸೀಗೆಗುಡ್ಡದಲ್ಲಿ ಚಿತ್ರೀಕರಣಗೊಂಡ ‘ಪ್ರೇಮದ ಊರಲಿ’ ಸಿನಿಮಾ ಯಶಸ್ಸಿನ ಬಳಿಕ, ಈ ಪ್ರದೇಶ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಪ್ರತಿದಿನ ಸಾವಿರಾರು ಜನರು ಸೀಗೆಗುಡ್ಡಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದ್ದು, ಸಿನಿಮಾ ಮೂಲಕ ಈ ಸುಂದರ ತಾಣಕ್ಕೆ ಹೊಸ ಜನಪ್ರಿಯತೆ ಸಿಕ್ಕಿದೆ.
ಒಂದು ಹಿಟ್ ಸಿನಿಮಾ… ಒಂದು ಸುಂದರ ತಾಣದ ಹೊಸ ಗುರುತು!
ಮನಮುಟ್ಟುವ ಕಥಾಹಂದರದೊಂದಿಗೆ ಬಂದ ‘ಪ್ರೇಮದ ಊರಲಿ’ ಚಲನಚಿತ್ರ ವಿಶ್ವದಾದ್ಯಂತ 121.78 ಕೋಟಿ ರೂಪಾಯಿ ಗಳಿಸುವ ಮೂಲಕ ವರ್ಷದ ಅತಿದೊಡ್ಡ ಬಾಕ್ಸ್ ಆಫೀಸ್ ಸರ್ಪ್ರೈಸ್ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಶ್ರೀರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಮತ್ತು ಹಿರಿಯ ನಟ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ತನ್ನ 31 ದಿನಗಳಲ್ಲಿ ಉತ್ತಮ ಪ್ರದರ್ಶನ ಕಾಣುವ ಮೂಲಕ ಹಲವು ದಾಖಲೆಗಳನ್ನು ಬರೆದಿದೆ.
1ನೇ ದಿನದ ಕಲೆಕ್ಷನ್: ರಾಷ್ಟ್ರಪ್ರಶಸ್ತಿ ವಿಜೇತ ನಟ ಮನೋಜ್ ಕುಮಾರ್ ನಿರ್ದೇಶನದ ಈ ಸಿನಿಮಾ ತನ್ನ ನಾಲ್ಕನೇ ಭಾನುವಾರದಂದು 4.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಪೈಕಿ ಚಿತ್ರದ ನೆಟ್ ಕಲೆಕ್ಷನ್ 3.75 ಕೋಟಿ ರೂಪಾಯಿ. ಚಿತ್ರ ಐದನೇ ವಾರವೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ವಿದೇಶಗಳಲ್ಲಿ ಈವರೆಗೆ ಒಟ್ಟು 3.45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ 2 ವಾರ ಉಳಿಯೋದೇ ಕಷ್ಟ. ಅಂಥದ್ದರಲ್ಲಿ ಈ ಕಂಟೆಂಟ್ ಸಿನಿಮಾ ವೀಕ್ ಡೇಸ್ನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಾ, ಇದೀಗ 5ನೇ ವಾರದ ಪ್ರದರ್ಶನ (ಅ.23ರಿಂದ) ಮುಂದುವರಿಸಿದೆ. ಇದಕ್ಕೂ ಮುನ್ನ ನಾಲ್ಕನೇ ವಾರವೂ ಅದ್ಭುತ ಪ್ರದರ್ಶನ ಕಂಡ ಕನ್ನಡದ ಕೆಲವೇ ಸಿನಿಮಾಗಳಲ್ಲಿ ಒಂದಾಗಿ ಪ್ರೇಮದ ಊರಲಿ ಹೊರಹೊಮ್ಮಿದೆ. ಇತ್ತೀಚೆಗಷ್ಟೇ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಒದಗಿಸಿದ ಮಾಹಿತಿ ಪ್ರಕಾರ, ನಾಲ್ಕನೇ ವಾರದ ನಿವ್ವಳ ಗಳಿಕೆ (ಕನ್ನಡ) ವಿಚಾರದಲ್ಲಿ, ಪ್ರೇಮದ ಊರಲಿ ಸಿನಿಮಾ ಕೆಜಿಎಫ್ 2 ಅನ್ನು ಹಿಂದಿಕ್ಕಿ, ಕಾಂತಾರದ ನಂತರದ ಸ್ಥಾನದಲ್ಲಿದೆ.
100 ಕೋಟಿ ಗಳಿಕೆ ಮಾಡುವ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿ ಹೊರಹೊಮ್ಮುತ್ತವೆ. ಅದಾಗ್ಯೂ, ಪ್ರೇಮದ ಊರಲಿ ವಿಶೇಷವಾಗಿ ಗುರುತಿಸಿಕೊಳ್ಳುತ್ತಿದೆ. ಏಕೆಂದರೆ ಇದು ಹೊಸಬರ, ಸ್ಮಾಲ್ ಬಜೆಟ್ ಸಿನಿಮಾ. ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಕೇವಲ ಪ್ರೇಕ್ಷಕರ ಬಾಯ್ಮಾತಿನ ಪ್ರಚಾರದಿಂದಲೇ ಗೆದ್ದಂತಹ ಸಿನಿಮಾ.
‘ಪ್ರೇಮದ ಊರಲಿ’ ಚಿತ್ರಕ್ಕೆ ಶಿವಣ್ಣ ಮೆಚ್ಚುಗೆ: 2026ರಲ್ಲಿ ನಾನು ನೋಡಿದ ಅತ್ಯುತ್ತಮ ಸಿನಿಮಾ ಎಂದ ಹ್ಯಾಟ್ರಿಕ್ ಹೀರೋ

ಕನ್ನಡ ಚಿತ್ರರಂಗದ ಇತ್ತೀಚಿನ ವಿದ್ಯಮಾನ ಹಾಗೂ ಗ್ರಾಮೀಣ ಭಾರತದ ವಾಸ್ತವಿಕ ಸ್ಥಿತಿಗೆ ಹಿಡಿದ ಕನ್ನಡಿಯಂತೆ ಈ ಮಾತುಗಳು ಮೂಡಿಬಂದಿವೆ.
“ಪ್ರೇಮದ ಊರಲಿ” ಸಿನಿಮಾ ಗಳಿಸಿರುವ ಯಶಸ್ಸು ಕೇವಲ ಗಲ್ಲಾಪೆಟ್ಟಿಗೆಯ ಗಳಿಕೆಗೆ ಸೀಮಿತವಾಗಿಲ್ಲ; ಅದು ಕನ್ನಡ ಚಿತ್ರರಂಗ ಮತ್ತು ಸಮಾಜದ ಮುಂದೆ ಎರಡು ಅತ್ಯಂತ ಗಂಭೀರ ಹಾಗೂ ಚಿಂತನಾರ್ಹ ಪ್ರಶ್ನೆಗಳನ್ನು ಇಟ್ಟಿದೆ:
೧. ಗ್ರಾಮೀಣ ಕಥನಗಳು ಮತ್ತು ಭಾವನೆಗಳ ಕಡೆಗಣನೆ
ಹಲವು ದಶಕಗಳಿಂದ ಕನ್ನಡ ಚಿತ್ರರಂಗವು ನಗರಾಧಾರಿತ (Urban centric) ಕಥೆಗಳು, ಅದ್ಧೂರಿ ಸೆಟ್ಗಳು ಮತ್ತು ಕೇವಲ ನಿರ್ದಿಷ್ಟ ವರ್ಗದ ಜನರನ್ನು ಆಕರ್ಷಿಸುವ ಗ್ಲಾಮರಸ್ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ.
- ನೆಲದ ಸತ್ವದ ಅಭಾವ: ನಾಡಿನ ಹಳ್ಳಿಗಳಲ್ಲಿನ ನೈಜ ಬದುಕು, ರೈತರ ಕಷ್ಟ-ಸುಖ, ಅಲ್ಲಿನ ಸಂಸ್ಕೃತಿ ಮತ್ತು ದೈನಂದಿನ ಭಾವನಾತ್ಮಕ ಹೋರಾಟಗಳು ತೆರೆಯ ಮೇಲೆ ಪ್ರಮುಖ ವಸ್ತುವಾಗುವುದು ಅಪರೂಪವಾಗಿತ್ತು.
- ಜನರ ಹಸಿವು: “ಪ್ರೇಮದ ಊರಲಿ” ಚಿತ್ರದ ಯಶಸ್ಸು ನಿರೂಪಿಸುವುದೇನೆಂದರೆ, ಜನರಿಗೆ ತಮ್ಮ ಮಣ್ಣಿನ ಕಥೆಗಳನ್ನು ನೋಡುವ ತೀವ್ರ ಹಸಿವಿತ್ತು. ಗ್ರಾಮೀಣ ಭಾಗದ ಜನರ ಭಾವನೆಗಳಿಗೆ ಸ್ಪಂದಿಸುವ ಸಿನಿಮಾಗಳು ಬಂದಾಗ ಅವರು ಅದನ್ನು ಕೈಬಿಡುವುದಿಲ್ಲ ಎಂಬುದಕ್ಕೆ ಈ ಸಿನಿಮಾ ಸಾಕ್ಷಿಯಾಗಿದೆ.
೨. ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಮನರಂಜನೆಯ ಹಕ್ಕಿನಿಂದ ವಂಚನೆ
ಶಿಕ್ಷಣ ಮತ್ತು ಆರೋಗ್ಯ ಹೇಗೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕೋ, ಹಾಗೆಯೇ “ಮನರಂಜನೆ” ಕೂಡ ಮನುಷ್ಯನ ಮಾನಸಿಕ ಆರೋಗ್ಯಕ್ಕೆ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಅತ್ಯಗತ್ಯ. ಆದರೆ ಗ್ರಾಮೀಣ ಭಾಗದಲ್ಲಿ:
- ಚಿತ್ರಮಂದಿರಗಳ ಅಭಾವ: ನಗರಗಳಲ್ಲಿ ಮಲ್ಟಿಪ್ಲೆಕ್ಸ್ಗಳು ಮತ್ತು ಅತ್ಯಾಧುನಿಕ ಚಿತ್ರಮಂದಿರಗಳು ತಲೆಯೆತ್ತುತ್ತಿದ್ದರೆ, ತಾಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ಒಂದೊಂದಾಗಿ ಏಕಪರದೆ (Single screen) ಥಿಯೇಟರ್ಗಳು ಮುಚ್ಚಿಹೋಗಿವೆ.
- ಪ್ರಯಾಸದ ಪ್ರಯಾಣ: ಹಳ್ಳಿಯ ಜನರಿಗೆ ಕುಟುಂಬ ಸಮೇತ ಒಂದು ಸಿನಿಮಾ ನೋಡಬೇಕೆಂದರೆ ಹತ್ತಾರು ಕಿಲೋಮೀಟರ್ ದೂರದ ನಗರಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ.
- ಆರ್ಥಿಕ ಮತ್ತು ಸಾಮಾಜಿಕ ಹೊರೆ: ಪ್ರಸಾಧನ ಸೌಲಭ್ಯ, ಶೌಚಾಲಯ, ಆಸನಗಳ ಕನಿಷ್ಠ ನೈರ್ಮಲ್ಯವೂ ಇಲ್ಲದ ಚಿತ್ರಮಂದಿರಗಳಿರುವುದು ಅಥವಾ ಸೌಲಭ್ಯವೇ ಇಲ್ಲದಿರುವುದು ಗ್ರಾಮೀಣ ಜನರನ್ನು ಮನರಂಜನಾ ಕ್ಷೇತ್ರದಿಂದ ದೂರ ತಳ್ಳಿದೆ.
ಮುಂದಿನ ಹಾದಿ:
ಈ ಸಿನಿಮಾ ಎತ್ತಿರುವ ಪ್ರಶ್ನೆಗಳು ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಮಾತ್ರವಲ್ಲದೆ ಸರ್ಕಾರಕ್ಕೂ ಎಚ್ಚರಿಕೆಯ ಕರೆ.
- ಚಿತ್ರರಂಗವು ಇನ್ಮುಂದಾದರೂ ಕೇವಲ ನಗರ ಕೇಂದ್ರಿತ ಕಥೆಗಳಿಗೆ ಸೀಮಿತವಾಗದೆ, ಮಣ್ಣಿನ ಸೌರಭವಿರುವ ಕಥೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕಿದೆ.
- ತಾಲೂಕು ಮತ್ತು ಸಣ್ಣ ನಗರಗಳಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಸೌಲಭ್ಯವಿರುವ ‘ಮಿನಿ ಥಿಯೇಟರ್’ ಅಥವಾ ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸುವತ್ತ ಸರ್ಕಾರ ಹಾಗೂ ಖಾಸಗಿ ರಂಗ ಗಮನಹರಿಸಬೇಕಿದೆ.
ಟಾಕ್ಸಿಕ್ ಸೋಲು, ಪ್ರೇಮದ ಊರಲಿ ಗೆಲುವು ಕಾರಣ?

ಈ ವರ್ಷ ಬಿಡುಗಡೆಯಾದ ಟಾಕ್ಸಿಕ್ ಸಿನಿಮಾ ಸೋತಿದೆ, ಪ್ರೇಮದ ಊರಲಿ ಸಿನಿಮಾ ಗೆದ್ದಿದೆ, ಈ ಗೆಲುವಿನ ಹಿಂದಿನ ಕಾರಣ ಏನು?
ಸೂರ್ಯವಂಶ ಸಿನಿಮಾದಲ್ಲಿ ಒಂದು ಸೀನ್ ಬರುತ್ತೆ..
ಮಾವ ಡಿಸಿ ಆಫೀಸ್ ಗೆ ಬೆಳೆಗಳಿಗೆ ಹೆಚ್ಚಿನ ನೀರು ಬಿಡಿ ಎಂದು ವಿನಂತಿಸಲು ಬಂದಿರುತ್ತಾರೆ. ಆಗ ಸೊಸೆ ಎದ್ದು ನಿಂತು ಅವರಿಗೆ ಗೌರವ ಸೂಚಿಸುವ ಜೊತೆಗೆ, ಪೇಪರ್ ವೇಯ್ಟ್ ಬೀಳಿಸಿ ಅವರಿಂದ ಆಶೀರ್ವದವನ್ನೂ ಪಡೆಯುತ್ತಾಳೆ. ಈ ದೃಶ್ಯದಲ್ಲಿ ಏನಾಯ್ತು ಅನ್ನೋದು ಸಾಮಾನ್ಯರಲ್ಲಿ ಸಾಮಾನ್ಯನಿಗೂ ಅರ್ಥವಾಗುತ್ತದೆ. ನಂತರದ ದೃಶ್ಯದಲ್ಲಿ ಮಾವನ ಕಾರ್ ಡ್ರೈವರ್ ಸೊಸೆ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಅಲ್ಲಿ ಏನೆಲ್ಲಾ ಆಯ್ತು ಅನ್ನೋದನ್ನ ಮತ್ತೆ ವಿವರಿಸುತ್ತಾನೆ. ಈ ಸಂಭಾಷಣೆ ನಂತರ ಈ ದೃಶ್ಯದಲ್ಲಿ ಏನಾಯ್ತು ಎಂದು ನನಗೆ ಅರ್ಥವಾಗಲಿಲ್ಲ ಎಂದು ಹೇಳುವವರ ಸಂಖ್ಯೆ ತೀರಾ ವಿರಳ.
ಯಶ್ ರ ಟಾಕ್ಸಿಕ್ ಸಿನಿಮಾದಲ್ಲಿ ಕೈಕಾಲುಗಳನ್ನ ಉಜ್ಜುತ್ತಾ.. ಬಟರ್ ಫ್ಲೈ ಕಲಾಕೃತಿಯನ್ನ ಮಾಡುತ್ತಾರೆ. ಇದರ ಅರ್ಥವೇನು? ಈ ದೃಶ್ಯ ಹೇಳಲು ಹೊರಟಿರುವುದೇನು ಅನ್ನೋದನ್ನ ಅರ್ಥಮಾಡಿಕೊಂಡವರನ್ನು ಭೂತಕನ್ನಡಿಹಾಕಿಯೇ ಹುಡುಕಬೇಕು.
ಇವತ್ತಿಗೆ ಸಿನಿಮಾ ಮಾಡಲು ಹೊರಡುವ ಬಹುತೇಕರು ಫೇಸ್ ಬುಕ್ ವಿಮರ್ಶಕರನ್ನ ಮೆಚ್ಚಿಸೋಕೆ ಹೋಗ್ತಾರೆ. ನೆಟ್ ಫ್ಲಿಕ್ಸ್ , ಅಮೆಜಾನ್, ಕೊರಿಯನ್ ಸೀರಿಸ್ ಕ್ರಿಸ್ಟೋಫರ್ ಹೀಗೆ ದೊಡ್ಡ ದೊಡ್ಡವರ ಸಿನಿಮಾ ನೋಡಿ ಬದುಕುತ್ತಿರುವವರಿಗೆ ಇಷ್ಟವಾಗುವ ಕಥಾ ವಸ್ತು ಸಾಮಾನ್ಯ ಜನರಿಗೆ ಅರ್ಥವಾಗುತ್ತಾ ಎಂದು ಯಾರೋ ಯೋಚಿಸುವುದಿಲ್ಲ.
ಆದರೆ ಇವತ್ತಿನ ಬಹುತೇಕ ಸಿನಿಕರ್ಮಿಗಳು, ದಿನಕ್ಕೆ ಮೂರು ಸಿನಿಮಾ ನೋಡುವವರನ್ನ ಮೆಚ್ಚಿಸೋಕೆ ಹೊರಡುತ್ತಾರೆ. ನಂತರದಲ್ಲಿ ಸಿನಿಮಾ ಸೋತರೆ ನಮಗೆ ಥಿಯೇಟರ್ ಸಿಗುತ್ತಿಲ್ಲ.. ಕನ್ನಡಿಗರು ಸಿನಿಮಾ ನೋಡುತ್ತಿಲ್ಲ.. ನಮ್ಮಲ್ಲಿ ಒಗ್ಗಟ್ಟಿಲ್ಲ… ಎಂದು ಅದೇ ರಿಪಿಟೀವ್ ಸಂಭಾಷಣೆಗಳನ್ನ ಹೇಳುತ್ತಾರೆ.
ವೈಯುಕ್ತಿಕವಾಗಿ ನನಗೆ ಪ್ರೇಮದ ಊರಿನಲ್ಲಿ ಸಿನಿಮಾ ಅದ್ಬುತ ಸಿನಿಮಾ ಎಂದೇನು ಅನ್ನಿಸಲಿಲ್ಲ. ಆದರೆ ಸಿನಿಮಾ ಗೆದ್ದಿರುವುದಂತೂ ಸತ್ಯ. ಇದಕ್ಕೆ ಮುಖ್ಯ ಕಾರಣ ಈ ಸಿನಿಮಾ ಚೆನ್ನಾಗಿದೆ ಚೆನ್ನಾಗಿಲ್ಲ ಎನ್ನುವುದಕ್ಕಿಂತ ಸಾಮಾನ್ಯನಲ್ಲಿ ಸಾಮಾನ್ಯನಿಗೂ ಅರ್ಥವಾಗುತ್ತೆ.
ಇನ್ನಾದರೂ ನಮ್ಮ ಕನ್ನಡದ ಸ್ಟಾರ್ ನಟರು ನಿರ್ಮಾಪಕರಿಗೆ ಪ್ರೇಕ್ಷಕರ ಸಿನಿಮಾ ಪ್ರೇಮದ ಪಲ್ಸ್ ಅರ್ಥ ಆಗುತ್ತದೆಯೇ?

