ಕನ್ನಡ ಚಿತ್ರರಂಗಕ್ಕೊಂದು ಹೊಸ ಭರವಸೆಯ ತಳಿ! 

 ಸುದೀಪ್ ಥರ ಆರು ಅಡಿ ಕಟೌಟ್,ಅಮಲು ಗಣ್ಣಿನಲ್ಲಿ ಸಂವಹನೆ, ಹೆಚ್ಚು ಕಡಿಮೆ ಸುದೀಪ್ ಡೈಲಾಗ್ ಡೆಲಿವರಿ ನೆನಪಿಸುವ ಧ್ವನಿ, ಮೊದಲ ಚಿತ್ರವಾದರೂ ಆ ರೀತಿ ಪ್ರೇಕ್ಷಕರಿಗೆ ಅನಿಸದ ರೀತಿಯಲ್ಲಿ ನಟನೆ! ಅಲ್ಲಿಗೆ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸುವ ಹೊಸ ತಳಿಯ ಆಗಮನವಾಗಿದೆ! ಹೌದು ನಾವು ಹೇಳ ಹೊರಟಿರುವುದು ಈ ಶುಕ್ರವಾರ ಬಿಡುಗಡೆಯಾದ ‘ ಮ್ಯಾಂಗೋ ಪಚ್ಚ ‘ ಚಿತ್ರದಲ್ಲಿ ನಟಿಸಿದ ಸಂಚಿತ್ ಸಂಜೀವ್ ಬಗ್ಗೆ.

ಈ ಹಿಂದೆ ಸಾಮಾನ್ಯವಾಗಿ ಹೊಸ ನಾಯಕನನ್ನು ಲಾಂಚ್ ಮಾಡುವಾಗ ಹೀರೋಗೆ ಬಿಲ್ಡ್ ಅಪ್ ಕೊಟ್ಟು , ಲವ್ ಟ್ರ್ಯಾಕ್ ಮತ್ತು ಹಾಡುಗಳು ಇರುತ್ತಿತ್ತು . ಆದರೆ ನಿರ್ದೇಶಕ ವಿವೇಕ ಪ್ರಕಾಶ್    ಮೈ ಸೂರಿನಲ್ಲಿ  ನಡೆಯುವ ಡ್ರಗ್ಸ್ ದಂದೆಯ ಕುರಿತು ಕಥೆ ಹೆಣೆದು ಸಂಚಿತ್ ಗೆ ಹೊಂದುವಂತಹ ಪಾತ್ರ ಮತ್ತು ಕಥೆ ಹೆಣೆದಿದ್ದಾರೆ.

ಬಡ ಕುಟುಂಬದಲ್ಲಿ ಹುಟ್ಟಿರುವ ಪ್ರಶಾಂತ್ ಆಲಿಯಾಸ್ ಪಚ್ಚ ಸಿನಿಮಾಗಳ ಪೈರಸಿ ಡಿವಿಡಿಗಳ ಕೇಸ್ ನಲ್ಲಿ ಅಂದರ್ ಆಗಿರುತ್ತಾನೆ. ಆದರೆ ಅವನು ಜೈಲು ಸೇರಲು ಕಾರಣ ಅವನು ಗಾಂಜಾ ಬೆಳೆದು ಡ್ರಗ್ ಪೆಡ್ಲರ್ ಆಗಿರೋದು ಕೂಡ ಪ್ರಮುಖ ಕಾರಣವಾಗಿರುತ್ತದೆ.ಇವನ ದಂದೆಗೆ ಮೈಸೂರು ಕಾರ್ಪೋರೇಶನ್ ಮೇಯರ್ ಮಹೇಂದ್ರ ಪ್ರಮುಖ ಕಿಂಗ್ ಪಿನ್ ಆಗಿ ಸಹಾಯ ಮಾಡುತ್ತಿರುತ್ತಾನೆ.ಕೊನೆಗೆ ಪಚ್ಚ ಅವನನ್ನೇ ಎದುರು ಹಾಕಿಕೊಂಡಾಗ ಪಚ್ಚನ ತಮ್ಮನನ್ನು ಮಹೇಂದ್ರ ಟಾರ್ಗೆಟ್ ಮಾಡುತ್ತಾನೆ. ಮಹೇಂದ್ರನ ಜೊತೆ ಪಚ್ಚನ ಮಲತಾಯಿ ಮಗ ನಾಗಪ್ಪ ಕೂಡ ಪಚ್ಚನ ವಿರುದ್ಧ ನಿಂತಿರುತ್ತಾನೆ. ಪಚ್ಚ ಜೈಲಿನಿಂದ ಹೊರಗಡೆ ಬರ್ತಾನಾ? ಮಹೇಂದ್ರನ ವಿರುದ್ಧ ಸಿಡಿದು ನಿಲ್ಲುತ್ತಾನಾ?ಅನ್ನುವುದನ್ನು ತಿಳಿಯಲು ಸಿನಿಮಾ ನೋಡಬೇಕು. 

ನಿರ್ದೇಶಕ ವಿವೇಕ ತನ್ನ ಪ್ರಥಮ ಪ್ರಯತ್ನದಲ್ಲಿ ತಾನು ಹೇಳ ಹೊರಟಿರುವ ವಿಷಯವನ್ನು 95 ನಿಮಿಷಗಳಲ್ಲಿ ಬೋರ್ ಆಗದೆ ಇರುವ ರೀತಿಯಲ್ಲಿ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಮಾಮೂಲಿ ಕಥೆ, ಇಂಟೆರ್ವಲ್ ನಂತರ ಊಹಿಸಬಹುದಾದ ಸನ್ನಿವೇಶಗಳು ಕೂಡ ಇದ್ದರೂ ಕೂಡ ಕಡಿಮೆ ಬಜೆಟ್ ನಲ್ಲಿ ಯಾವುದೇ ಅತಿರೇಕವಿಲ್ಲದೆ ನಿರ್ದೇಶಕರು ಸಿನಿಮಾ ಕಟ್ಟಿ ಕೊಟ್ಟಿದ್ದಾರೆ.
     ಕಥೆಯ ಕಾಲ ಘಟ್ಟಕ್ಕೆ ಅನುಗುಣವಾಗಿ ವಸ್ತುಗಳನ್ನು ಮತ್ತು ವಾಹನಗಳನ್ನು ಬಳಸಿರುವುದು ಕೂಡ ಇಲ್ಲಿ ಗಮನಾರ್ಹ. ಛಾಯಾಗ್ರಾಹಕ ಶೇಖರ್ ಚಂದ್ರ ಮೈಸೂರನ್ನು ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಚಿತ್ರದಲ್ಲಿ ಹೀರೋ ಪಾತ್ರವನ್ನು ವೈಭವೀಕರಿಸುವ ಡೈಲಾಗುಗಳನ್ನು ನೀಡದೆ ಕಥೆಗೆ ತಕ್ಕಂತೆ ಸಂಭಾಷಣೆಯನ್ನು ಬರೆದಿರುವುದು ವಿಶೇಷ.

ಚರಣ್ ರಾಜ್ ಅವರ ಹಿನ್ನಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಕೂಡ. ಹಿನ್ನಲೆ ಸಂಗೀತ ಸಿನಿಮಾದ ಓಟಕ್ಕೆ ಸಹಕಾರಿಯಾಗಿದೆ,ಅದರಲ್ಲೂ ಹಸ್ರವ್ವ ಹಾಡು ಹಿನ್ನಲೆಯಲ್ಲಿ ಬಳಸಿಕೊಂಡಿರುವ ರೀತಿ ಇಷ್ಟವಾಗುತ್ತದೆ.ಆದರೆ ಹಾಡುಗಳು ಮಾತ್ರ ಸಿನಿಮಾ ನೋಡಿದ ನಂತರ ನೆನಪಿನಲ್ಲಿ ಉಳಿಯುವುದಿಲ್ಲ.

 ನಟನೆಯ ವಿಷಯಕ್ಕೆ ಬಂದಾಗ ಸಂಚಿತ್ ಸಂಜೀವ್ ಅಭಿನಯ ನೋಡಿದಾಗ ಕನ್ನಡಕ್ಕೆ ಒಬ್ಬ ಒಳ್ಳೆ ಮಾಸ್ ಹೀರೋ ಸಿಕ್ಕಂತಾಗಿದೆ. ಪಚ್ಚನನ್ನು ಪ್ರೀತಿಸುವ ಟೀ ಮಾರುವ ಹುಡುಗಿಯಾಗಿ ಕಾಜಲ್ ಕುಂದರ್ ಗೆ ಹೆಚ್ಚಿನ ಅವಕಾಶವಿಲ್ಲದಿದ್ದರೂ ಉತ್ತಮ ಅಭಿನಯ ನೀಡಿದ್ದಾರೆ.ಬಹು ದಿನಗಳ ನಂತರ ಕಾಣಿಸಿಕೊಂಡ ಮದನ್ ಪಾಟೀಲ್ ಗೆ ಒಳ್ಳೆ ಪಾತ್ರ ಸಿಕ್ಕಿದೆ. ಮೇಯರ್ ಮಹೇಂದ್ರ ಪಾತ್ರದಲ್ಲಿ ನಟಿಸಿರುವ ರಂಗಾಯಣದ ಪ್ರತಿಭೆ, ಕನ್ನಡಕ್ಕೊಬ್ಬ ಒಳ್ಳೆ ಖಳ ನಟನಾಗುವ ಸೂಚನೆ ನೀಡಿದ್ದಾರೆ. ಇನ್ನು ಉಳಿದಂತೆ ಹರಿಣಿ ಶ್ರೀಕಾಂತ್, ಭಾವನಾ, ಉಗ್ರಂ ಮಂಜು, ಹಂಸ ಪ್ರತಾಪ್ ಜೈ ಗೋಪಿನಾಥ್ ಅಭಿನಯ ಚೆನ್ನಾಗಿದೆ.

 ಒಟ್ಟಿನಲ್ಲಿ ಕಥೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಕಡಿಮೆ ಅವಧಿಯ ಸಿನಿಮಾ ನೋಡ ಬಯಸುವ ಪ್ರೇಕ್ಷಕರಿಗೆ ಮ್ಯಾಂಗೋ ಪಚ್ಚ ಇಷ್ಟ ಆಗಬಹುದು.

support our advertisers
Scroll to Top