✍️ ಶರತ್ ಚಂದ್ರ
ಯೂಟ್ಯೂಬ್ ನಲ್ಲಿ ಶಾರ್ಟ್ ಫಿಲಂ ಮೂಲಕ ಒಂದಷ್ಟು ವರ್ಷಗಳಿಂದ ದೂಳೆಬ್ಬಿಸುತ್ತಿರುವ ತಂಡದಿಂದ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿ 25 ದಿನಗಳು ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದ ‘ಅಮೃತ ಅಂಜನ್ ‘ಈಗ ಓಟಿಟಿಗೆ ಬಂದಿದೆ. ಇದೇ ತಿಂಗಳ 10ನೇ ತಾರೀಖಿನಿಂದ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಅಮೃತ ಅಂಜನ್ ‘ಬಿಗ್ ಸ್ಕ್ರೀನ್ ನಲ್ಲಿ ಕೂಡ ಒಳ್ಳೆ ಗಳಿಗೆ ಕಂಡಿತ್ತು.

ಇದೇ ಹೆಸರಿನ ಶಾರ್ಟ್ ಮೂವಿ ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ಓಡಿದ್ದು ಈ ತಂಡಕ್ಕೆ ಇವರದೇ ಆದ ಫ್ಯಾನ್ ಬೇಸ್ ಇದ್ದುದರಿಂದ ಹಾಗೂ ಸಿನಿಮಾವನ್ನು ಕಡಿಮೆ ಬಜೆಟ್ಟಿನಲ್ಲಿ ನಿರ್ಮಿಸಿದ್ದರಿಂದ ಚಿತ್ರದ ನಿರ್ಮಾಪಕರಿಗೆ ಈ ಚಿತ್ರ ಹಾಕಿದ ಹಣಕ್ಕಿಂತ ಹೆಚ್ಚಿನ ಹಣ ತಂದು ಕೊಟ್ಟಿದೆ ಎಂದು ಹೇಳಲಾಗಿದೆ

. ಒಂದಷ್ಟು ಶಾರ್ಟ್ ಮೂವಿಗಳನ್ನು ನಿರ್ದೇಶಿಸಿ ಯಶಸ್ಸನ್ನು ಕಂಡ ಜ್ಯೋತಿರಾವ್ ಮೋಹಿತ್, ತಮ್ಮ ರೆಗ್ಯುಲರ್ ಶಾರ್ಟ್ ಮೂವಿಗಳ ಕಾಮಿಡಿ ಕಾನ್ಸೆಪ್ಟ್ ಆಧಾರಿಸಿ ಕಥೆ ಮಾಡಿದ್ದರು. ಹಾಸ್ಯದ ಜೊತೆಗೆ ಒಂದಷ್ಟು ತಂದೆ ಮಗನ ಬಾಂಧವ್ಯದ ಸೆಂಟಿಮೆಂಟ್ ದೃಶ್ಯಗಳನ್ನು ಪೋಣಿಸಿ ಮಾಡಿದ ಕಥೆ ಜನರಿಗೆ ಇಷ್ಟವಾಗಿತ್ತು.

ಈ ಹಿಂದೆ ಅವರ ಕಿರು ಚಿತ್ರಗಳಲ್ಲಿ ಅಭಿನಯಿಸಿದ ಪಾಯಲ್ ಚಂಗಪ್ಪ, ಶ್ರೀ ಭವ್ಯ, ಸುಧಾಕರ್ ಗೌಡ, ಗೌರವ್ ಶೆಟ್ಟಿ, ಕಾರ್ತಿಕ್ ರೂವಾರಿ, ಪಲ್ಲವಿ ವಜ್ರ ಮುಂತಾದ ಕಲಾವಿದರ ಜೊತೆಗೆ ನವೀನ್ ಪಡೀಲ್ ಅವರ ತಂದೆಯ ಪಾತ್ರ ಕೂಡ ಗಮನ ಸೆಳೆದಿತ್ತು. ಒಟ್ಟಿನಲ್ಲಿ ಈ ಹಿಂದೆ ಈ ತಂಡದ ಯಾವುದೇ ಕಿರು ಚಿತ್ರಗಳನ್ನು ನೋಡದೇ ಇದ್ದರೂ ಸಹ ಈ ಚಿತ್ರವನ್ನು ಒಮ್ಮೆ ವೀಕ್ಷಿಸಬಹುದು.

