ಪಟಾಕಾ ನಭಾ ಜೊತೆ “ಕೆಮಿಸ್ಟ್ರಿ” ಗಿಳಿದ ಧ್ರುವ, ಎರಡು ಚಿತ್ರಗಳ ಘೋಷಣೆ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು (ಅಕ್ಟೋಬರ್ 6) ಜನ್ಮದಿನದ ಸಂಭ್ರಮ. ಇದರ ಅಂಗವಾಗಿ ಅವರ ಅಭಿಮಾನಿಗಳಿಗೆ ಚಿತ್ರತಂಡದಿಂದ ಭರ್ಜರಿ ಸರ್ಪ್ರೈಸ್ ಸಿಕ್ಕಿದೆ. ಖ್ಯಾತ ಟಾಲಿವುಡ್ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವ ಪ್ರಸಾದ್ ಹಾಗೂ ಕೃತಿ ಪ್ರಸಾದ್ ನಿರ್ಮಿಸುತ್ತಿರುವ ಈ ನೂತನ ಸಿನಿಮಾಗೆ ‘ಕೆಮಿಸ್ಟ್ರಿ’ ಎಂದು ಶೀರ್ಷಿಕೆ ಇಡಲಾಗಿದೆ. ಜೊತೆಗೆ ಪ್ರೋಮೋ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ‘ತತ್ಸಮ ತದ್ಭವ’ ಚಿತ್ರದ ಮೂಲಕ ಗಮನಸೆಳೆದಿದ್ದ ನಿರ್ದೇಶಕ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಬಿಡುಗಡೆಯಾಗಿರುವ ಟೀಸರ್ನಲ್ಲಿ ಧ್ರುವ ಸರ್ಜಾ ಅವರ ಮಾಸ್ ಮತ್ತು ಕ್ಲಾಸ್ ಶೈಲಿಯ ಡೈಲಾಗ್‌ಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ‘ಪ್ರೀತಿ, ಕೋಪ, ಫೈಟು, ಕೇರಿಂಗ್ ಹಾಗೂ ಬ್ರೇಕಪ್… ಈ ಎಲ್ಲದರ ನಡುವೆ ಇರೋ ಒಂದೇ ಒಂದು ಕಾಮನ್ ಪಾಯಿಂಟ್ ಎಂದರೆ ಅದುವೇ ಕೆಮಿಸ್ಟ್ರಿ’ ಎನ್ನುವ ಡೈಲಾಗ್ಸ್ ವೀಡಿಯೊದಲ್ಲಿ ಹೈಲೈಟ್ ಆಗಿವೆ. ಹೈ-ವೋಲ್ಟೇಜ್ ಆಕ್ಷನ್ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಧ್ರುವ, ಈ ಬಾರಿ ಈ ಫೀಲ್-ಗುಡ್ ಎಮೋಷನಲ್ ಶೇಡ್‌ನಲ್ಲಿ ಡೈಲಾಗ್ ಹೊಡೆಯುತ್ತಿರುವುದು ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಈವರೆಗೂ ಭರ್ಜರಿ ಸಾಹಸ, ಮಾಸ್ ಡೈಲಾಗ್‌ಗಳ ಮೂಲಕವೇ ಚಿತ್ರಮಂದಿರಗಳಲ್ಲಿ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಧ್ರುವ ಸರ್ಜಾ, ಈ ಬಾರಿ ಮನಮಿಡಿಯುವ ಪ್ರೇಮಕಥೆ ಮತ್ತು ಅಪ್ಪಟ ಕೌಟುಂಬಿಕ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿರುವುದು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ.ಸ್ಟಾರ್ ನಟ ಧ್ರುವ ಸರ್ಜಾ ಹಾಗೂ ಯುವ ಪ್ರತಿಭೆ ವಿಶಾಲ್ ಆತ್ರೇಯ ಅವರ ಜೋಡಿ ಈ ಪ್ರಾಜೆಕ್ಟ್‌ನ ಮತ್ತೊಂದು ವಿಶೇಷತೆ. ಒಬ್ಬ ಖ್ಯಾತ ಮಾಸ್ ಹೀರೋ ಯುವ ನಿರ್ದೇಶಕನ ಕ್ರಿಯೇಟಿವ್ ವಿಷನ್‌ಗೆ ಕೈಜೋಡಿಸಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಧ್ರುವ ಸರ್ಜಾ ನಂದ ಸುಧೀರ್ ಕಾಂಬಿನೇಶನ್ ನ ನೂತನ ಚಿತ್ರ “ವಸುದೈವ ಕುಟುಂಬಕಂ”

ಇನ್ನೋಂದೆಡೆ ಮೈರಾ ಕ್ರಿಯೇಷನ್ಸ್ ಲಾಂಛನದಲ್ಲಿ ಹರೀಶ್ ಪೆದ್ದಿ ಅವರು ನಿರ್ಮಿಸುತ್ತಿರುವ, ಬಿ.ಎಸ್ ಸುಧೀಂದ್ರ ಅವರ ಸಹ ನಿರ್ಮಾಪಕರಾಗಿರುವ ಹಾಗೂ ನಂದ ಸುಧೀರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ “ವಸುದೈವ ಕುಟುಂಬಕಂ” ಎಂದು ಹೆಸರಿಡಲಾಗಿದೆ. “ಪೊಗರು” ಚಿತ್ರದ ನಂತರ ಧ್ರುವ ಸರ್ಜಾ ಹಾಗೂ ನಂದ ಸುಧೀರ್ ಕಾಂಬಿನೇಶನ್ ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಮೂಲಕ ನಂದಕಿಶೋರ್ ಅವರು ನಂದ ಸುಧೀರ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.
“ವಸುದೈವ ಕುಟುಂಬಕಂ”, ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಲವ್, ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿರುತ್ತದೆ. ಧ್ರುವ ಸರ್ಜಾ ಅವರ ಅಭಿನಯದ ಚಿತ್ರದ ಹಾಡುಗಳು ಜನಪ್ರಿಯವಾಗಿದೆ. ಈ ಚಿತ್ರದಲ್ಲೂ ಸಹ ಸುಮಧುರ ಗೀತೆಗಳಿರುತ್ತದೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನವಿರುವ “ವಸುದೈವ ಕುಟುಂಬಕಂ” ಚಿತ್ರದಲ್ಲಿ ಹೆಸರಾಂತ ಹಾಗೂ ಅನುಭವಿ ಕಲಾವಿದರ ಬಹುದೊಡ್ಡ ತಾರಾಬಳಗವಿರುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ.

