ವರಮಹಾಲಕ್ಷ್ಮಿ ದಿನ ಬಿಡುಗಡೆಯಾಗಬೇಕಿದ್ದ ಪವನ್ ಒಡೆಯರ್ ನಿರ್ದೇಶನದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಬೇಲ್ ‘ಚಿತ್ರ ಗಾಂಧಿ ಜಯಂತಿಯಂದು ಬಿಡುಗಡೆಯಾಗಲಿದೆ. ಅಮೇರಿಕಾದಲ್ಲಿ ಶಸ್ತ್ರ ಚಿಕಿತ್ಸೆ ಮುಗಿಸಿ ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡ ನಂತರ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಚಿತ್ರ ಕೂಡ ಇದಾಗಿದೆ.
ಸಿನಿಮಾ ಬಿಡುಗಡೆಗೆ ಮುನ್ನ ಪತ್ರಿಕಾ ಮಿತ್ರರಿಗೆ ವಿಶೇಷ ಸಂದರ್ಶನವನ್ನು ತಮ್ಮ ನಿವಾಸದಲ್ಲಿ ಸಂದರ್ಶನ ಏರ್ಪಡಿಸಿದ್ದರು. ಶಿವಣ್ಣ ಪತ್ರಕರ್ತರ ಮುಂದೆ ಮನ ಬಿಚ್ಚಿ ಮಾತನಾಡಿದರು.ಶಸ್ತ್ರ ಚಿಕಿತ್ಸೆಗೆ ಮುಂಚೆ ಪವನ್ ಒಡೆಯರ್ ಬೇಲ್ ಚಿತ್ರದ ಸಲುವಾಗಿ ಸಂಪರ್ಕಿಸಿ ಚಿತ್ರದ ಕಥೆ ಮತ್ತು ಶಿವಣ್ಣ ನ ಪಾತ್ರದ ಕುರಿತು ಬ್ರೀಫ್ ಮಾಡಿದ್ರಂತೆ. ಆಪರೇಷನ್ ಆಗುವ ತನಕ ತಾನು ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎಂದು ನಯವಾಗಿ ತಿರಸ್ಕರಿಸಿದ್ದರಂತೆ.

ಎಲ್ಲಾ ಸರಿ ಹೋಗುತ್ತೆ ತಾವು ಗುಣಮುಖರಾಗಿ ಬನ್ನಿ, ಆ ಪಾತ್ರ ನೀವೇ ಮಾಡಬೇಕು,ನಾವು ಕಾಯುತ್ತೇವೆ ಎಂದು ಹೇಳಿದ ಪವನ್ ಒಡೆಯರ್ ಮತ್ತು ಕೆ ವಿ ಎನ್ ಸಂಸ್ಥೆ ಸಿನಿಮಾಗೆ ಚಾಲನೆ ನೀಡಿ ಈಗ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ.
ನನ್ನ ಚಿತ್ರ ಜೀವನದಲ್ಲಿ ಮೊದಲ ಬಾರಿಗೆ ತನನ್ನ ವಯಸ್ಸಿಗೆ ಮೀರಿದ ಪಾತ್ರ ಮತ್ತು ಗೆಟ್ ಅಪ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರೂ ಕೂಡ ಚಿತ್ರದಲ್ಲಿ ಜಯರಾಮ್ ಮತ್ತು ಸಾಯಿ ಕುಮಾರ್ ಜೊತೆಗಿನ ಡಾರ್ಕ್ ಕಾಮಿಡಿ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗಬಹುದು ಎಂದು ತಿಳಿಸಿದರು.

ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ಅದರರದ್ದೇ ಆದ ಮಹತ್ವ ಇದೆ. ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ,ಸಂಜನಾ ಆನಂದ್,ಯೋಗಿ ಸೇರಿ ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದಾರೆ.
ಶಿವಣ್ಣ ಬಿಡುವಿದ್ದಾಗ ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ತಮಿಳಿನ ಸೂರ್ಯ ನಟಿಸಿದ್ದ’ ಸನ್ ಆಫ್ ವಿಶ್ವನಾಥ್’ ಚಿತ್ರ ಅವರನ್ನು ಬಹಳಷ್ಟು ಕಾಡಿದೆಯಂತೆ. ಕೆಲವು ಸನ್ನಿವೇಶಗಳು ತಾನು ನಟಿಸಿದ ರಿಷಿ ಚಿತ್ರಕ್ಕೆ ಕನೆಕ್ಟ್ ಆಯ್ತಂತೆ.ಇತ್ತೀಚೆಗೆ ಬೇರೆ ಭಾಷೆಗಳ ಚಿತ್ರಗಳಲ್ಲಿ ಕೂಡ ಹೆಚ್ಚಾಗಿ ನಟಿಸುತ್ತಿರುವ ಶಿವರಾಜಕುಮಾರ್ ಈಗಾಗಲೇ ‘ಜೈಲರ್ 2 ‘ಚಿತ್ರ ಮುಗಿಸಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರ ವಿಸ್ತರಣೆಯಾಗಿದೆಯಾ ಎಂದು ಕೇಳಿದ ಪ್ರಶ್ನೆಗೆ ಚಿತ್ರದಲ್ಲಿ ತನ್ನ ಪಾತ್ರ ಎಷ್ಟು ಬೇಕೋ ಅಷ್ಟು ಇದೆ ಎಂದು ಜಾಣ್ಮೆಯಿಂದ ಉತ್ತರಿಸಿದರು .

ಆ ಸಿನಿಮಾ ಹೊರತುಪಡಿಸಿ ಪಿಕಾಸೋ ಚಿತ್ರದಲ್ಲಿ ನಾಯಕ ಅಭಿಶಾನ್ ಗೆ ತಂದೆಯಾಗಿ ಒಂದು ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಪೋಸ್ಟರ್ ಇತ್ತೀಚೆಗೆ ಎಲ್ಲರ ಗಮನ ಸೆಳೆದಿದೆ. ಉಳಿದಂತೆ ತಮಗೆ ಮಲಯಾಳಂ ಚಿತ್ರರಂಗದಿಂದ ಕೂಡ ಆಫರ್ ಗಳು ಬರುತ್ತಿದ್ದು,ಯಾವುದನ್ನೂ ಒಪ್ಪಿಕೊಂಡಿಲ್ಲವಂತೆ .ಸಿನಿಮಾ ಕಂಪ್ಲೀಟ್ ಮಾಡುವ ಸಾಮರ್ಥ್ಯ ಇರುವ ನಿರ್ಮಾಪಕರಿಗೆ ಮಾತ್ರ ಡೇಟ್ಸ್ ನೀಡುತ್ತಿರುವುದಾಗಿ ತಿಳಿಸಿದ್ದಾರೆ ಗುಮ್ಮಡಿ ನರಸಯ್ಯ ತೆಲುಗು ಚಿತ್ರದ ನಿರ್ಮಾಪಕರು ವಿದೇಶದಲ್ಲಿ ಇರುವುದರಿಂದ ಚಿತ್ರ ಆರಂಭವಾಗುವುದು ತಡವಾಗಿದೆ.ಒಟ್ಟಿನಲ್ಲಿ ಈ ಸಿನಿಮಾ ಸದ್ಯಕ್ಕೆ ಶುರುವಾಗಲಿದೆ.
ಮರಾಠಿ ಚಿತ್ರವೊಂದು ಆಸ್ಕರ್ ಸ್ಪರ್ಧೆಗೆ ಆಯ್ಕೆಯಾಗಿದ್ದು ಕನ್ನಡದಲ್ಲಿ ಏಕೆ ಇಂಥ ಚಿತ್ರಗಳು ಬರುತ್ತಿಲ್ಲ,ಹಾಗೂ ಸ್ಪರ್ಧೆಗೆ ಯಾರೂ ಯಾಕೆ ಕಳಿಸುತ್ತಿಲ್ಲ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ತಮ್ಮ ಬ್ಯಾನರ್ ನಲ್ಲಿ ಆರಂಭವಾಗಲಿರುವ’ ಎ ಫಾರ್ ಆನಂದ್ ‘ಚಿತ್ರಕ್ಕೆ ಆ ತಾಕತ್ತು ಇದೆ, ನಿರ್ದೇಶಕ ಶ್ರೀನಿ ಒಂದು ವಿಭಿನ್ನ ಕಾನ್ಸೆಪ್ಟ್ ನೊಂದಿಗೆ ಈ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ತಯಾರಾದ ಮೇಲೆ ಆಸ್ಕರ್ ಸ್ಪರ್ಧೆಗೆ ಕಳುಹಿಸುತ್ತೇವೆ ಎಂಬ ಭರವಸೆಯ ಮಾತನಾಡಿದ್ದಾರೆ.

ಮಗಳು ನಿವೇದಿತಾ ತುಂಬಾ ಭರವಸೆ ಇಟ್ಟು ಮಾಡಿದಂತಹ ‘ಫೈರ್ ಫ್ಲೈ ‘ಚಿತ್ರ ಅಂತಹ ಯಶಸ್ಸು ಕಾಣದೆ ಇದ್ದಾಗ ಆಕೆಗೆ ನಿರಾಶೆಯಾಗಿತ್ತು.ಬೇರೆ ಭಾಷೆಗಳಲ್ಲಿ ಇಂತಹ ಚಿತ್ರಗಳು ಬಂದಾಗ ಸ್ವೀಕರಿಸುವ ಹಾಗೆ ಕನ್ನಡದಲ್ಲಿ ಕೂಡ ಇಂತಹ ವಿಭಿನ್ನ ಪ್ರಯತ್ನಕ್ಕೆ ಬೆಂಬಲ ಸಿಗಬೇಕು. ಮುಂದೆ ಕೂಡ ನಿವೇದಿತಾ ಒಳ್ಳೆಯ ಸಬ್ಜೆಕ್ಟ್ ಇಟ್ಕೊಂಡು ಸಿನಿಮಾ ಮಾಡುವ ಯೋಚನೆಯಲ್ಲಿದ್ದಾಳೆ ಈಗಾಗಲೇ ಒಂದಷ್ಟು ಕಥೆಗಳನ್ನು ಕೇಳಿದ್ದು ಶೀಘ್ರದಲ್ಲೇ ಹೊಸ ಚಿತ್ರದ ನಿರ್ಮಾಣ ಮಾಡಲಿದ್ದಾಳೆ ಎಂದು ತಿಳಿಸಿದರು.
ಈ ಹಿಂದೆ ಒಂದಷ್ಟು ಸಾರ್ವಜನಿಕ ಸಮಾರಂಭಗಳಲ್ಲಿ ಶಿವಣ್ಣ ಮಾತಾಡಿದ ಒಂದಷ್ಟು ವಿಷಯಗಳು ವಿವಾದಾತ್ಮಕ ಸ್ವರೂಪ ಪಡೆದಿದ್ದು, ಸೋಶಿಯಲ್ ಮೀಡಿಯ ಮತ್ತು ಕೆಲವೊಂದು ಮೀಡಿಯಾ ಗಳಲ್ಲಿ ದೊಡ್ಡ ಸದ್ದು ಮಾಡಿತ್ತು ಶಿವಣ್ಣನ ಮಾತನ್ನು ಸಾಕಷ್ಟು ಜನ ಟ್ರೊಲ್ ಕೂಡ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಶಿವಣ್ಣ ಇದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವರಿಗೆ ಇದರಿಂದ ಖುಷಿ ಸಿಗುವುದಾದರೆ ನನಗೆ ತೊಂದರೆ ಇಲ್ಲ ಒಂದೊಂದು ಸಾರಿ ನಾನು ಕೂಡ ಇಂತಹ ಟ್ರೊಲ್ ಗಳನ್ನು ಎಂಜಾಯ್ ಮಾಡುತ್ತೇನೆ ಎಂದು ಖಡಕ್ಕಾಗಿ ಟ್ರೋಲ್ ಮಾಡುವವರಿಗೆ ಉತ್ತರ ನೀಡಿದ್ದಾರೆ.

ಒಟ್ಟಿನಲ್ಲಿ ಕನ್ನಡದಲ್ಲಿ ತುಂಬಾ ಸಮಯದ ನಂತರ ಶಿವರಾಜ್ ಕುಮಾರ್ ಅವರನ್ನು ತೆರೆ ಮೇಲೆ ಕಣ್ಣು ತುಂಬಿಕೊಳ್ಳಲು ಅವರ ಅಭಿಮಾನಿ ಬಳಗ ಹಾಗೂ ಕನ್ನಡ ಪ್ರೇಕ್ಷಕರು ಬೇಲ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದರು . ಆ ಕಾಯುವಿಕೆ ಅಂತ್ಯವಾಗಿದೆ ಇದೇ ಶುಕ್ರವಾರ ಬಿಡುಗಡೆಯಾಗುವ ಬೇಲ್ ಚಿತ್ರ ಮತ್ತು ಚಿತ್ರತಂಡಕ್ಕೆ ಶುಭವಾಗಲಿ




