ಸ್ಯಾಂಡಲ್ವುಡ್ನಲ್ಲಿ ಅಪರೂಪದ ಕಾಂಬಿನೇಷನ್ವೊಂದು ಒಂದಾಗಿದ್ದು, ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ನಟಿ ರುಕ್ಮಿಣಿ ವಸಂತ್ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ‘ಮಂಗಳಗೌರಿ’ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ.

ಚಿತ್ರದ ಪೋಸ್ಟರ್ನಲ್ಲಿ ರುಕ್ಮಿಣಿ ವಸಂತ್ ಪೊಲೀಸ್ ಅಧಿಕಾರಿಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ಅವರ ಪಕ್ಕದಲ್ಲಿ ಲಗೇಜ್ ಸೂಟ್ಕೇಸ್ ಹಿಡಿದು ನಿಂತಿರುವ ಮಾಲಾಶ್ರೀ ಮಾಸ್ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಪೋಸ್ಟರ್ನ ಹಿನ್ನೆಲೆಯಲ್ಲಿ ‘ಲಕ್ನೋ’ ಎಂಬುದು ಕಾಣಿಸಿಕೊಂಡಿದ್ದು, ಇಬ್ಬರು ನಟಿಯರ ವಿಭಿನ್ನ ಪಾತ್ರಗಳು ಹಾಗೂ ಕಾಂಬಿನೇಷನ್ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ.
‘ಸಕುಟುಂಬ ಸಮೇತ’ ಸಿನಿಮಾ ಖ್ಯಾತಿಯ ರಾಹುಲ್ ಪಿ.ಕೆ ‘ಮಂಗಳಗೌರಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಹೇಮಂತ್ ಎಂ. ರಾವ್ ಅವರ ದಾಕ್ಷಾಯಣಿ ಟಾಕೀಸ್ ಜಂಟಿಯಾಗಿ ಬಿಗ್ ಬಜೆಟ್ನಲ್ಲಿ ಚಿತ್ರ ನಿರ್ಮಿಸುತ್ತಿವೆ. ರಾಹುಲ್ ಪಿ.ಕೆ ಮತ್ತು ಪೂಜಾ ಸುಧೀರ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ಹಾಗೂ ವಿಶಾಲ್ ಕೃಷ್ಣಮೂರ್ತಿ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವಿಕ್ರಮ್ ಮೋರ್ ಸಾಹಸ ನಿರ್ದೇಶನ ಮಾಡಲಿದ್ದಾರೆ.

ವಿಭಿನ್ನ ತಲೆಮಾರಿನ ಇಬ್ಬರು ಪ್ರಮುಖ ನಟಿಯರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ‘ಮಂಗಳಗೌರಿ’ ಚಿತ್ರದ ನಿರೀಕ್ಷೆ ಹೆಚ್ಚಿಸಿದೆ. ಫಸ್ಟ್ ಲುಕ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರೀಕರಣದ ಮುಂದಿನ ಅಪ್ಡೇಟ್ಗಳನ್ನು ಚಿತ್ರತಂಡ ಶೀಘ್ರದಲ್ಲೇ ನೀಡಲಿದೆ.

