‘ಅಯೋಗ್ಯ 2’ : ಇದು ಸಿದ್ದೇಗೌಡನ ಪಂಚಾಯ್ತಿ ದರ್ಬಾರ್

ಚಿತ್ರ: ಅಯೋಗ್ಯ 2
ನಿರ್ದೇಶನ: ಎಸ್. ಮಹೇಶ್ ಕುಮಾರ್.
ನಿರ್ಮಾಣ: ಎಂ. ಮುನೇಗೌಡ
ತಾರಾಂಗಣ: ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್ ಪಿ., ಸಾಧು ಕೋಕಿಲ, ಗಿರೀಶ್ ಶಿವಣ್ಣ, ಶಿವರಾಜ್ ಕೆ.ಆರ್. ಪೇಟೆ, ದೇವರಾಜ್, ತಬಲಾ ನಾಣಿ, ಸುಂದರ್ ರಾಜ್, ರವಿಚಂದ್ರನ್ ಮುಂತಾದವರು.
ರೇಟಿಂಗ್:
3 / 5 ***

  • ರಾಘವೇಂದ್ರ ಅಡಿಗ ಎಚ್ಚೆನ್.

ಮಾರಗೌಡನಹಳ್ಳಿಯ ಸಿದ್ದೇಗೌಡ (ಸತೀಶ್ ನೀನಾಸಂ) ಒಂದೇ ಒಂದು ಮತದಿಂದ ಬಚ್ಚೇಗೌಡ (ರವಿಶಂಕರ್) ವಿರುದ್ಧ ಗೆದ್ದು ಗ್ರಾಮ ಪಂಚಾಯಿತಿ ಸದಸ್ಯನಾಗಿರುತ್ತಾನೆ. ಅವನ ಪತ್ನಿ ನಂದಿನಿ (ರಚಿತಾ ರಾಮ್) ಸ್ವಂತ ಪರಿಶ್ರಮದಿಂದ ಸರ್ಕಾರಿ ನೌಕರಿ ಪಡೆದುಕೊಂಡಿದ್ದಾಳೆ. ಆದರೆ ಸಿದ್ದೇಗೌಡನ ತಾಯಿಗೆ ತನ್ನ ಸೊಸೆ ನೌಕರಿಗೆ ಹೋಗುವುದು ಇಷ್ಟವಿಲ್ಲ ಮತ್ತು ತನ್ನ ಮಗ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಬೇಕೆನ್ನುವ ಹಂಬಲವಿದೆ. ಆದರೆ ಬಚ್ಚೇಗೌಡನ ಬೆಂಬಲಿಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾನೆ. ಆಗ ನಡೆಯುವ ಸಿದ್ದೇಗೌಡ ಹಾಗೂ ಬಚ್ಚೇಗೌಡನ ನಡುವಿನ ರಾಜಕೀಯದ ಗುದ್ದಾಟವೇ “ಅಯೋಗ್ಯ 2” ಚಿತ್ರದ ಕಥಾಹಂದರ.

2018ರಲ್ಲಿ ‘ಅಯೋಗ್ಯ’ ಸಿನಿಮಾ ಹಾಡಿನ ಮೂಲಕವೇ ಸದ್ದು ಮಾಡಿತ್ತು. ಈ ಸಿನಿಮಾ ನಿರ್ದೇಶಕರಾಗಿರುವ ಎಸ್. ಮಹೇಶ್ ಕುಮಾರ್ ಅವರೇ ಆ ಸಿನಿಮಾಗೂ ನಿರ್ದೇಶನ ಮಾಡಿದ್ದರು, ಅಂದು ನಟಿಸಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲಿಯೂ ಮುಂದುವರಿದಿದ್ದಾರೆ. ಚಿತ್ರದ ಕಥೆ ಎಂದಿನ ಸಿದ್ದಸೂತ್ರದಲ್ಲೇ ಮುಂದುವರಿಯುತ್ತದೆ. ಊರಿಗೆ ಮೋರಿ ಕಟ್ಟಿಸಿಕೊಡುತ್ತೇನೆಂಬ ಭರವಸೆಯಿಂದಿಗೆ ಪಂಚಾಯಿತಿ ಸದಸ್ಯನಾದ ಸಿದ್ದೇಗೌಡ ಎರಡನೇ ಭಾಗದಲ್ಲಿಯೂ ಮೋರಿ ಕಟ್ಟಿಸಿಕೊಡುವುದಿಲ್ಲ. ಸರ್ಕಾರಿ ನೌಕಳಾಗಿರುವ ನಂದಿನಿ, ಊರಿನ ನಡುವೆ ರಾಷ್ಟ್ರೀಯ ಹೆದ್ದಾರಿ ಬರುತ್ತದೆ ಎನ್ನುವುದನ್ನು ತಿಳಿದರೂ ಊರ ಜನರ ಸಮಸ್ಯೆ ಬಗೆಹರಿಸುವುದಕ್ಕಾಗಿ ಯಾವ ಕೆಲಸ ಮಾಡುವುದಿಲ್ಲ. ಇನ್ನು ಪಂಚಾಯಿತಿ ಚುನಾವಣೆಗಳಲ್ಲಿಯೂ ರೆಸಾರ್ಟ್ ರಾಜಕೀಯದ ಕಥೆ ಹೆಣೆದಿದ್ದಾರೆ ನಿರ್ದೇಶಕರು. ಇಡೀ ಚಿತ್ರದಲ್ಲಿ ಕೇವಲ ಸಿದ್ದೇಗೌಡನ ಪಾತ್ರದ ಬಿಲ್ಡ್ ಅಪ್‌ಗಳೇ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಕೆಲವೊಂದು ಹಾಡುಗಳು ಕಥೆಗೆ ಪೂರಕ ಎನಿಸುವುದಿಲ್ಲ. ಕೆಲವೊಂದು ಸಾಹಸ ದೃಶ್ಯಗಳಿಗೂ ಸಹ ಇದೇ ಮಾತು ಅನ್ವಯಿಸುತ್ತದೆ. ಇನ್ನು ಮಹತ್ವದ ವಿಷಯವೆಂದರೆ ಕಡೆಯಲ್ಲಿ ಮುಂಬರುವ ಭಾಗದ ಕಥೆಯನ್ನು ಜೋಡಿಸಿದ್ದಾರೆ. ಇಲ್ಲಿ ಅಂತೂ ಸಿದ್ದೇಗೌಡನ ಕಥೆ ಇಷ್ಟಕ್ಕೇ ಮುಗಿದಿಲ್ಲ ಎಂದು ಮತ್ತೆ ಪ್ರೇಕ್ಷಕರಿಗೆ ಹೇಳಿದಂತಿದೆ.

ನಾಯಕ ಸತೀಶ್ ನೀನಾಸಂಗೆ ಸಾಕಷ್ಟು ಬಿಲ್ಡಪ್ ಇದ್ದು, ನಾಯಕಿ ರಚಿತಾ ಅವರ ಪಾತ್ರಕ್ಕೆ ಮತ್ತಷ್ಟು ಪ್ರಾಮುಖ್ಯತೆ ಕೊಡುವ ಅವಕಾಶವನ್ನು ನಿರ್ದೇಶಕರು ಕೈಚೆಲ್ಲಿದ್ದಾರೆ. ಬಚ್ಚೇಗೌಡರ ಪಾತ್ರದಲ್ಲಿ ರವಿಶಂಕರ್ ಖಡಕ್ ಅಭಿನಯ ಕೊಟ್ಟಿದ್ದಾರೆ. ರಾಗಿ ಭಾಯ್ ಆಗಿ ಬರುವ ಸಾಧುಕೋಕಿಲಾ ಅವರ ಪಾತ್ರದ ಜೊತೆಗೆ ಬೆಣ್ಣೆ ಮತ್ತು ಮಟನ್ ಆಗಿ ಗಿರೀಶ್ ಶಿವಣ್ಣ ಹಾಗೂ ಶಿವರಾಜ್ ಕೆ.ಆರ್. ಪೇಟೆ ಉತ್ತಮವಾಗಿ ಅಭಿನಯಿಸಿದ್ದಾರೆ. ಇನ್ನು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ದೇವರಾಜ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಗಿಟ್ಟಿಸುತ್ತಾರೆ.

ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತದಲ್ಲಿ ಪುಟ್ಟಲಕ್ಷ್ಮಿ ಹಾಡು ಉತ್ತಮವಾಗಿ ಮೂಡಿ ಬಂದಿದ್ದು, ಉಳಿದಂತೆ ನಾಯಕನ ಎಂಟ್ರಿಯ ಹಾಡೊಂದು ತಕ್ಕಮಟ್ಟದಲ್ಲಿದೆ. ಒಟ್ಟಾರೆ ದೊಡ್ಡ ಕಲಾವಿದರ ದಂಡೆ ಹಾಗೂ ಅತ್ಯುತ್ತಮ ತಾಂತ್ರಿಕ ಸಿಬ್ಬಂದಿಯ ಕೆಲಸವಿದ್ದರೂ ಸಹ, ಕಥೆಯಲ್ಲಿ ಹೊಸತನವಿರದೆ ಇರುವುದು ಚಿತ್ರಕ್ಕೆ ಹಿನ್ನಡೆಯಾಗಬಹುದು.

support our advertisers
Scroll to Top