ಮತ್ತೊಮ್ಮೆ ಕಿರುತೆರೆಗೆ ಬಿಗ್ ಬಿ, ಆಗಸ್ಟ್ 10ರಿಂದ ಕೆಬಿಸಿ 18 ಪ್ರಾರಂಭ!

“ದೇವಿಯೋ ಔರ್ ಸಜ್ಜನ್ ನೋ… ನಮಸ್ಕಾರ್!” – ಈ ಗಂಭೀರ, ಗಾಂಭೀರ್ಯದ ಧ್ವನಿ ಕೇಳಿದರೆ ಸಾಕು, ಇಡೀ ಭಾರತದಾದ್ಯಂತ ಟಿವಿ ವಾಲ್ಯೂಮ್ ತುಸು ಹೆಚ್ಚಾಗುತ್ತದೆ. ಹೌದು, ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತಿದೊಡ್ಡ ರಸಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್ ಪತಿ’ ತನ್ನ 18ನೇ ಸೀಸನ್‌ನೊಂದಿಗೆ ಅದ್ದೂರಿಯಾಗಿ ಆಗಸ್ಟ್ ೧೦ರಿಂದ ಬರಲಿದೆ. ಆದರೆ ಈ ಬಾರಿಯ ಕೆಬಿಸಿ ಕೇವಲ ‘ಪ್ರಶ್ನೆ-ಉತ್ತರ’ಗಳ ಆಟವಲ್ಲ, ಇದು ನಿಮ್ಮ ಮೆದುಳಿಗೆ ಭರ್ಜರಿ ಕೆಲಸ ನೀಡುವ ‘ಸೋಚನಾ ಪಡೇಗಾ’ (ಯೋಚಿಸಲೇಬೇಕು) ಎಂಬ ಹೊಸ ಥೀಮ್‌ನೊಂದಿಗೆ ಸಜ್ಜಾಗಿದೆ!


ಈಗಾಗಲೇ ಬಿಡುಗಡೆಯಾಗಿರುವ ಮೂರು ವಿಶೇಷ ಪ್ರೋಮೋಗಳು ಅಭಿಮಾನಿಗಳಲ್ಲಿ ಕುತೂಹಲದ ಕಿಚ್ಚು ಹಚ್ಚಿವೆ. ಮೊದಲ ಪ್ರೋಮೋದಲ್ಲಿ ಬಿಗ್ ಬಿ, “ಉತ್ತರಗಳು ಈಗ ಜೇಬಿನಲ್ಲೇ ಸಿಗುತ್ತವೆ, ಅದಕ್ಕೆ ನಾವು ಉತ್ತರವನ್ನೇ ಬದಲಿಸಲು ಪ್ರಯತ್ನಿಸಿದ್ದೇವೆ” ಎಂದು ಹೇಳುವ ಮೂಲಕ ಹೊಸ ಟ್ವಿಸ್ಟ್‌ನ ಸುಳಿವು ನೀಡಿದ್ದಾರೆ. ಇದು ಹಲವರ ಆತಂಕಕ್ಕೆ ಕಾರಣವಾಗಿದೆ. ಎರಡನೇ ಪ್ರೋಮೋದಲ್ಲಿ, ಕೇವಲ ಪುಸ್ತಕದ ಬದನೆಕಾಯಿ ಜ್ಞಾನ ಸಾಕಾಗುವುದಿಲ್ಲ, ನಿಮ್ಮ ವಿವೇಚನಾ ಶಕ್ತಿ ಮುಖ್ಯ ಎಂದು ಎಚ್ಚರಿಸಿದ್ದಾರೆ. ಮೂರನೇ ಪ್ರೋಮೋ ಎಐ (AI) ಯುಗದ ಬಗ್ಗೆ ಮಾತನಾಡುತ್ತದೆ. ಬದಲಾಗುತ್ತಿರುವ ಜಗತ್ತಿನಲ್ಲಿ ಎಐ ತಂತ್ರಜ್ಞಾನ ನಮಗೆ ಸಹಾಯ ಮಾಡಬಹುದು, ಆದರೆ ಮನುಷ್ಯನ ಸಹಜ ಬುದ್ಧಿವಂತಿಕೆಗೆ ಸಾಟಿಯಿಲ್ಲ ಎಂಬ ಸಂದೇಶ ಇಲ್ಲಿದೆ. ಇದು ಕೂಡ ಹಲವರು ಹುಬ್ಬೇರಿಸುವಂತೆ ಮಾಡಿದೆ.
ಕೌನ್ ಬನೇಗಾ ಕರೋಡ್‌ಪತಿ ಸೀಸನ್ 18 ಆಗಸ್ಟ್ 10ರಿಂದ ಪ್ರಸಾರ ಆರಂಭವಾಗಲಿದ್ದು, ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ, ಸೋನಿ ಲಿವ್ OTT ವೇದಿಕೆಯಲ್ಲಿಯೂ ಕಾರ್ಯಕ್ರಮವನ್ನು ಲೈವ್ ಹಾಗೂ ರೆಕಾರ್ಡೆಡ್ ರೂಪದಲ್ಲಿ ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ಲಭ್ಯವಾಗಲಿದೆ.
2000ರಲ್ಲಿ ಆರಂಭವಾದ ಈ ಕ್ವಿಜ್ ರಿಯಾಲಿಟಿ ಶೋ, ಬ್ರಿಟಿಷ್ ಕಾರ್ಯಕ್ರಮ ‘Who Wants To Be A Millionaire?’ ಮಾದರಿಯನ್ನು ಆಧರಿಸಿ ನಿರ್ಮಿಸಲಾಗಿತ್ತು. ಆರಂಭದಿಂದಲೂ ಅಮಿತಾಬ್ ಬಚ್ಚನ್ ಅವರ ನಿರೂಪಣೆಯೇ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಳಿಸಿದೆ. ಇದುವರೆಗೆ 17 ಸೀಸನ್‌ಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಈ ಕಾರ್ಯಕ್ರಮದ ಇತಿಹಾಸದಲ್ಲಿ ಕೇವಲ ಒಂದೇ ಬಾರಿ ಅಮಿತಾಬ್ ಬಚ್ಚನ್ ಅವರ ಬದಲಿಗೆ ಬೇರೆ ನಿರೂಪಕರು ಕಾಣಿಸಿಕೊಂಡಿದ್ದರು. 2007ರಲ್ಲಿ ಪ್ರಸಾರವಾದ ಮೂರನೇ ಸೀಸನ್‌ಗೆ ಬಾಲಿವುಡ್ ನಟ ಶಾರುಖ್ ಖಾನ್ ನಿರೂಪಕರಾಗಿದ್ದರು. ಆದರೆ ನಂತರದ ಎಲ್ಲಾ ಸೀಸನ್‌ಗಳಲ್ಲೂ ಅಮಿತಾಬ್ ಬಚ್ಚನ್ ಅವರೇ ಕಾರ್ಯಕ್ರಮವನ್ನು ಮುನ್ನಡೆಸಿದ್ದಾರೆ.

support our advertisers
Scroll to Top