ಇಂದು ಕನ್ನಡ ಚಿತ್ರರಂಗದ ವರನಟ ಡಾ. ರಾಜಕುಮಾರ್ ಅವರ ಜನ್ಮದಿನ. ಕನ್ನಡದ ಅಸ್ಮಿತೆಯಾಗಿ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ ಅಭಿನಯಿಸದೆ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತವಾಗಿ ಸ್ಥಾನ ಗಳಿಸಿಕೊಂಡಿರುವ ಡಾ. ರಾಜಕುಮಾರ್, ತಮ್ಮ ಅಚಲ ನಿರ್ಧಾರದಂತೆ ಕನ್ನಡ ಚಿತ್ರಗಳನ್ನು ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ ಅಭಿನಯಿಸಿಲ್ಲ! ಅವರು ಅಭಿನಯಿಸಿದ 38ಕ್ಕೂ ಹೆಚ್ಚು ಚಿತ್ರಗಳು ಬೇರೆ ಬೇರೆ ಭಾಷೆಯಲ್ಲಿ ರಿಮೇಕ್ ಆಗಿವೆ!. ಒಂದಷ್ಟು ಜನಪ್ರಿಯ ಚಿತ್ರಗಳು ಬೇರೆ ಭಾಷೆಗಳಲ್ಲಿ ಡಬ್ ಕೂಡ ಆಗಿವೆ .ಆದರೆ ತಾವು ಮಾತ್ರ ಕನ್ನಡ ಬಿಟ್ಟು ಎಲ್ಲಿಗೂ ಹೋಗಿಲ್ಲ!

ದಕ್ಷಿಣದ ಹೆಚ್ಚಿನ ನಟ ನಟಿಯರು ಬೆಂಗಳೂರಿಗೆ ಭೇಟಿ ನೀಡಿದಾಗ,ಅಣ್ಣಾವ್ರ ಸದಾಶಿವನಗರದ ಮನೆಗೆ ಭೇಟಿ ನೀಡುತ್ತಿದ್ದು ನಿಮಗೆಲ್ಲ ಗೊತ್ತಿರೋ ವಿಷಯ. ಒಂದಷ್ಟು ಬಾಲಿವುಡ್ ನ ತಾರೆಯರು ಕೂಡ ಅಣ್ಣಾವ್ರ ಮನೆಗೆ ಬಂದು ಆತಿಥ್ಯ ಸ್ವೀಕರಿಸುತ್ತಿದ್ದರು. ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಂತೂ ಬೆಂಗಳೂರು ಅಥವಾ ಮೈಸೂರಿನಲ್ಲಿ ಶೂಟಿಂಗ್ ಇದ್ದಾಗ ಅಣ್ಣವ್ರು ಬದುಕಿದ್ದಾಗ ಅಣ್ಣಾವ್ರನ್ನು ಭೇಟಿ ಮಾಡದೇ ಹೋಗುತ್ತಿರಲಿಲ್ಲ!

ಅವರ ಸಂದರ್ಶನದಲ್ಲಿ ಡಾ. ರಾಜಕುಮಾರ್ ಅವರ ಬಗ್ಗೆ ಕೇಳಿದಾಗ, ಅವರು ಮಾಡಿರುವ ವೈವಿಧ್ಯಮಯ ಪಾತ್ರಗಳನ್ನು ಯಾವುದೇ ನಟ ಮಾಡಲು ಸಾಧ್ಯವಿಲ್ಲ, ಅವರ ಅಭಿನಯದ ಮುಂದೆ ನಾವೆಲ್ಲ ಏನು ಇಲ್ಲ ಎಂಬ ವಿಷಯವನ್ನು ಅವರು ಸಾಕಷ್ಟು ಸಾರಿ ಹೇಳಿದ್ದಾರೆ. ಅದರಲ್ಲೂ ಅಮಿತಾಬ್ ಬಚ್ಚನ್ ಅವರು ಅಪ್ಪು ಅವರನ್ನು ತುಂಬಾ ಇಷ್ಟ ಪಡುತ್ತಿದ್ದರು ! ಪುನೀತ್ ಚಿಕ್ಕವರಿದ್ದಾಗ ಎತ್ತಿ ಮುದ್ದಾಡುತ್ತಿದ್ದ ಅಮಿತಾಬ್ ಬಚ್ಚನ್ ಗೆ ಅಣ್ಣಾವ್ರ ಜೊತೆ ಅತ್ಯುತ್ತಮ ಬಾಂಧವ್ಯವಿತ್ತು.

ಕೂಲಿ ಚಿತ್ರದ ಸಾಹಸ ಸನ್ನಿವೇಶ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಅವಘಡ, ಸಾವು ಬದುಕಿನ ಹೋರಾಟದಲ್ಲಿದ್ದಾಗ ಅಮಿತಾಬ್ ಅವರು ಗುಣಮುಖರಾಗಿ ಬರಲಿ ಎಂದು ಅಣ್ಣಾವ್ರು ಹರಕೆ ಹೊತ್ತಿದ್ದರಂತೆ. ಈಗ ಮುಖ್ಯ ವಿಷಯಕ್ಕೆ ಬರೋಣ, ನಿಮಗೆಲ್ಲ ತಿಳಿದಿರುವಂತೆ ಮನಮೋಹನ್ ದೇಸಾಯಿ ನಿರ್ದೇಶನದ ‘ಕೂಲಿ’ ಹಿಂದಿ ಚಿತ್ರದ ಹೆಚ್ಚಿನ ಭಾಗ ಬೆಂಗಳೂರಿನಲ್ಲಿ ಚಿತ್ರೀಕರಣವಾಗಿತ್ತು.ರೈಲ್ವೆ ಕೂಲಿ ಪಾತ್ರದಲ್ಲಿ ಅಭಿನಯಿಸಿರುವ ಅಮಿತಾಬ್ ಬಚ್ಚನ್ ಅವರಿಗೆ ಈ ಚಿತ್ರದಲ್ಲಿ ಡಾ. ರಾಜಕುಮಾರ್ ಅವರ ಬಳಿ ಒಂದು ಗೌರವ ಪಾತ್ರ ಮಾಡಿಸಬೇಕೆಂಬ ಅಸೆ ಇತ್ತಂತೆ. ಅಣ್ಣಾವ್ರು ನಟ ಡಾ. ರಾಜಕುಮಾರ್ ಅವರಾಗಿ ಟ್ರೈನ್ನಿಂದ ಇಳಿದಾಗ, ಬಚ್ಚನ್ ಅವರ ಪಾತ್ರ ರಾಜ್ಕುಮಾರ್ ಅವರ ಲಗೇಜ್ ಹೊರಲು ಸಹಾಯ ಮಾಡಬೇಕಿತ್ತು ಮತ್ತು ಗೌರವಾರ್ಥವಾಗಿ ಅದಕ್ಕೆ ಹಣವನ್ನು ನೀಡಿದಾಗ,ಕೂಲಿಯಾಗಿ ನಟನ ಮೇಲೆ ಗೌರವದಿಂದ ಹಣ ಪಡೆಯಲು ನಿರಾಕರಿಸುತ್ತಾನೆ

. ಆದರೆ ಡಾ. ರಾಜ್ ಈ ಆಫರ್ ನ್ನು ನಯವಾಗಿ ನಿರಾಕರಿಸಿ,ತಾನು ಕನ್ನಡ ಬಿಟ್ಟು ಯಾವುದೇ ಭಾಷೆಯ ಚಲನಚಿತ್ರದಲ್ಲಿ ಅಭಿನಯಿಸುವುದಿಲ್ಲ ಎಂದು ತಿಳಿಸಿದ್ದರಂತೆ. ಒಟ್ಟಿನಲ್ಲಿ ಅಣ್ಣಾವ್ರು 200ಕ್ಕಿಂತ ಹೆಚ್ಚು ಚಿತ್ರಗಳನ್ನು ಕನ್ನಡ ಭಾಷೆಯಲ್ಲಿ ಮಾತ್ರ ಮಾಡಿ ತಮ್ಮ ಕನ್ನಡಾಭಿಮಾನ ಮೆರೆದಿದ್ದಾರೆ

